ಮಂಜೇಶ್ವರ: ಖ್ಯಾತ ಕವಿ ವಿದ್ವಾಂಸ ಡಾ.ಸಿದ್ಧಲಿಂಗಯ್ಯ ಅವರ ಅನಿರೀಕ್ಷಿತ ನಿಧನದ ವಾರ್ತೆ ಅತ್ಯಂತ ವಿಷಾದವನ್ನುಂಟು ಮಾಡಿದೆ ಎಂದು ಖ್ಯಾತ ಸಾಹಿತಿ, ಯಕ್ಷಗಾನ ಅರ್ಥದಾರಿ, ವೈದ್ಯ ಡಾ.ರಮಾನಂದ ಬನಾರಿ ಸಂತಾಪ ವ್ಯಕ್ತಪಡಿಸಿದ್ದಾರೆ. ರಾಜ್ಯಮಟ್ಟದಲ್ಲೂ ರಾಷ್ಟ್ರಮಟ್ಟದಲ್ಲೂ ಕೀರ್ತಿಗೆ ಭಾಜನರಾಗಿದ್ದ ಸಿದ್ಧಲಿಂಗಯ್ಯನವರು ವಿಧಾನ ಪರಿಷ್ತತ್ತಿನ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದವರು. ಕನ್ನಡ ಪ್ರಾಧಿಕಾರದ ಮತ್ತು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದವರು. ಸಾಹಿತ್ಯದ ಶ್ರೇಷ್ಠ ಪ್ರಶಸ್ತಿಗಳಿಂದ ಗೌರವಿಸಲ್ಪಟ್ಟದ್ದು ಮಾತ್ರವಲ್ಲ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅಲಂಕರಿಸಿದ್ದರು. ಕಾಸರಗೋಡಿನ ಕನ್ನಡಿಗರೊಂದಿಗೆ ನಿಕಟವಾದ ಸಂಪರ್ಕವನ್ನು ಕಾಯ್ದುಕೊಂಡಿದ್ದ ಅವರು ವೈಯಕ್ತಿಕವಾಗಿ ಆತ್ಮೀಯರೂ ಆಗಿದ್ದವರು. ಅವರ ಅಗಲುವಿಕೆಯಿಂದಾಗಿ ನಾಡು ನುಡಿ ಬಡವಾಗಿದೆ. ದಿವಂಗತರ ಸಾಧನೆಗಳ ನೆನಪು ನೂರ್ಕಾಲವುಳಿಯಲಿ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಕುಟುಂಬದವರ ದುಃಖದಲ್ಲಿ ನಾವೂ ಸಹಭಾಗಿಗಳು. ದೇವರು ನೆಮ್ಮದಿಯನ್ನು ಕರುಣಿಸಲಿ ಎಂದು ಡಾ.ಬನಾರಿ ತಿಳಿಸಿದ್ದಾರೆ.
ಎಂ.ಉಮೇಶ ಸಾಲ್ಯಾನ್ ಸಂತಾಪ:
ಡಾ.ಸಿದ್ದಲಿಂಗಯ್ಯರ ನಿಧನದ ಬಗ್ಗೆ ಕೇರಳ ತುಳು ಅಕಾಡೆಮಿ ಅಧ್ಯಕ್ಷ, ರಂಗಕರ್ಮಿ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಆಘಾತ ವ್ಯಕ್ತಪಡಿಸಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿದ್ದಲಿಂಗಯ್ಯರೊಂದಿಗಿನ ಸಂಪರ್ಕ ಮತ್ತು ಅವರಿಂದ ಪಡೆದ ಪ್ರೇರಣೆ ರಂಗಭೂಮಿ ಜೀವನದಲ್ಲಿ ಮರೆಯಲಾಗದ್ದು ಎಂದವರು ತಿಳಿಸಿದ್ದಾರೆ.




