ಬೆಂಗಳೂರು: ಗಡಿನಾಡು ಕಾಸರಗೋಡು ಜಿಲ್ಲೆಯ ಕೆಲವು ಪ್ರದೇಶಗಳ ಕನ್ನಡ ಸ್ಥಳನಾಮಗಳನ್ನು ಬದಲಾಯಿಸಬಾರದು ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಕೇರಳ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕೇರಳ ಸರ್ಕಾರವು ಕಾಸರಗೋಡಿನ ಕೆಲವು ಪ್ರದೇಶಗಳ ಕನ್ನಡ-ತುಳು ಸ್ಥಳನಾಮಗಳನ್ನು ಮಲೆಯಾಳೀಕರಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.
ಕಾಸರಗೋಡು ಕರ್ನಾಟಕದೊಂದಿಗೆ ನಿಕಟ ಸಂಬಂಧ ಹೊಂದಿದೆ. ಕರ್ನಾಟಕವು ಕಾಸರಗೋಡಿನ ಜನರೊಂದಿಗೆ ಸಾಂಸ್ಕøತಿಕ ಸಂಬಂಧವನ್ನು ಹೊಂದಿದೆ. ವಾಸ್ತವವಾಗಿ, ಕಾಸರಗೋಡು ಭಾಷಾ ಏಕತೆ ಮತ್ತು ಸಹಕಾರದ ಸಂಕೇತವಾಗಿ ಉಳಿದಿದೆ.
ಕಾಸರಗೋಡಿನಲ್ಲಿ ಕನ್ನಡ ಮತ್ತು ಮಲಯಾಳಂ ಮಾತನಾಡುವ ಜನರ ಸಂಖ್ಯೆ ಸಮವಾಗಿದ್ದರೂ, ಅವರು ಬಹಳ ಒಗ್ಗಟ್ಟಿನಿಂದಿದ್ದಾರೆ. ಅವರು ಎಂದಿಗೂ ಭಾಷೆಯ ಬಗ್ಗೆ ಜಗಳವಾಡಿಲ್ಲ. ಭವಿಷ್ಯದಲ್ಲಿಯೂ ನಾವು ಅಂತಹ ಏಕತೆಯನ್ನು ಕಾಪಾಡಿಕೊಳ್ಳಬೇಕು. ರಾಜಕೀಯವು ಭಾವನೆಗಳ ಮೇಲೆ ಆಟವಾಡುವ ಈ ದಿನ ಮತ್ತು ಯುಗದಲ್ಲಿ, ಭಾಷಾ ಏಕತೆಯನ್ನು ಕಾಪಾಡುವುದು ಕಡ್ಡಾಯವಾಗಿದೆ ಮತ್ತು ಅಗತ್ಯವೂ ಹೌದು ಎಂದಿರುವರು.
ಆದ್ದರಿಂದ, ಅಲ್ಲಿ ವಾಸಿಸುವ ಕನ್ನಡ ಜನರ ಸಾಂಪ್ರದಾಯಿಕ ಭಾವನೆಗಳನ್ನು ಕಾಪಾಡುವುದು ಕೇರಳ ಮತ್ತು ಕರ್ನಾಟಕದ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಸ್ಥಳಗಳ ಹೆಸರನ್ನು ಮಲಯಾಳೀಕರಣಗೊಳಿಸುವ ಕ್ರಮದಿಂದ ಹಿಂದೆ ಸರಿಯುವಂತೆ ಕೇರಳ ಸರ್ಕಾರವನ್ನು ಕೋರುತ್ತೇನೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.





