ತಿರುವನಂತಪುರ: ಸ್ಯಾನಿಟರಿ ಪ್ಯಾಡ್‍ಗಳ ನೈರ್ಮಲ್ಯವು ಮಹಿಳೆಯರು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ. ಆದರೆ ತಿರುವನಂತಪುರ ನಗರದ ಮಹಿಳೆಯರು ಇನ್ನು ಮುಂದೆ ಈ ಕಷ್ಟವನ್ನು ಎದುರಿಸಬೇಕಾಗಿಲ್ಲ. ಪ್ಲಸ್ ಟು ವಿದ್ಯಾರ್ಥಿನಿಯೋರ್ವೆ ಇದಕ್ಕೆ ಶಾಶ್ವತ ಪರಿಹಾರವನ್ನು ಕಂಡುಕೊಂಡಿದ್ದಾರೆ.
ಅಟ್ಟುಕ್ಕಾಲ್ ನಲ್ಲಿ ವಾಸಿಸುವ ಸುರೇಶ್ ಕುಮಾರ್ ಮತ್ತು ಕವಿತಾ ಅವರ ಹಿರಿಯ ಪುತ್ರಿ ಐಶ್ವರ್ಯಾ ಇದಕ್ಕೆ ಪರಿಹಾರವನ್ನು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಐಶ್ವರ್ಯಾ ಬರೆದ ಪತ್ರವು ಮಹಿಳೆಯರ ಸಮಸ್ಯೆಯನ್ನು ಪರಿಹರಿಸಿದೆ. ಇದರ ಪರಿಣಾಮವಾಗಿ, ನಗರದ ಎಲ್ಲಾ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು, ಸರ್ಕಾರಿ ಕಚೇರಿಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಸ್ಯಾನಿಟರಿ ಪ್ಯಾಡ್ ಗಳ ವೆಂಟಿಂಗ್ ಯಂತ್ರಗಳು ಮತ್ತು ದಹನಕಾರಕಗಳನ್ನು ಅಳವಡಿಸುವ ಪ್ರಕ್ರಿಯೆ ಈಗ ಪ್ರಗತಿಯಲ್ಲಿದೆ.
ಐಶ್ವರ್ಯ ಅಟ್ಟುಕ್ಕಾಲ್ ಚಿನ್ಮಯ ವಿದ್ಯಾಲಯದ ಪ್ಲಸ್ ಟು ವಿದ್ಯಾರ್ಥಿನಿ. ಐಶ್ವರ್ಯ ಅವರು ಎಂಟನೇ ತರಗತಿಯಲ್ಲಿದ್ದಾಗ ತಯಾರಿಸಿದ ಯೋಜನೆ ದೊಡ್ಡ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಾಫಲ್ಯ ಕಂಡಿತು. ಕಲಿಕೆಯ ಭಾಗವಾದ ಯೋಜನೆಗಾಗಿ ಐಶ್ವರ್ಯಾಗೆ ನೀಡಲಾದ ವಿಷಯವು ಪ್ರಕೃತಿಗೆ ಹಾನಿಕಾರಕವಾದ ಮಾಲಿನ್ಯಕ್ಕೆ ಕಾರಣ ಮತ್ತು ಪರಿಹಾರ ಎಂಬುದಾಗಿತ್ತು. ಬಳಸಿದ ನೈರ್ಮಲ್ಯ ಪ್ಯಾಡ್ ಗಳನ್ನು ವೈಜ್ಞಾನಿಕವಾಗಿ ಹೇಗೆ ವಿಲೇವಾರಿಗೊಳಿಸಲು ಸಾಧ್ಯ ಎಂದು ಐಶ್ವರ್ಯ ಅವರ ಯೋಜನೆ ಪ್ರಸ್ತುತಪಡಿಸಿತು. ಇದು ಶಾಲಾ ಅಧಿಕಾರಿಗಳ ಗಮನ ಸೆಳೆದು ಚಿನ್ಮಯ ಶಾಲೆಯಲ್ಲಿ ಪ್ಯಾಡ್ ವೆಂಟಿಂಗ್ ಯಂತ್ರ ಮತ್ತು ವಿಲೇವಾರಿ ಘಟಕ ಸ್ಥಾಪಿಸಲು ಕಾರಣವಾಯಿತು.
ಆದರೆ ಪ್ಯಾಡ್‍ಗಳ ಸಂಸ್ಕರಣೆ ಭಾರತದ ಎಲ್ಲ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಯೆಂದು ಮನಗಂಡ ಐಶ್ವರ್ಯ ಅವರು ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ನಿರ್ಧರಿಸಿದರು. ನಂತರ ಅವರು ಲೆಟರ್ ಟು ಪ್ರಧಾನ ಮಂತ್ರಿ ಸೈಟ್ಗೆ ಹೋಗಿ ಮೇಲ್ ಕಳುಹಿಸಿದ್ದರು. ಎರಡು ದಿನಗಳ ಬಳಿಕ ಪ್ರಧಾನಮಂತ್ರಿಯವರ ಕಚೇರಿಯಿಂದ ಉತ್ತರ ಬಂದಿದ್ದು, ವಿಷಯವನ್ನು ಪುರಸಭೆಗೆ ತಿಳಿಸಲಾಗಿದೆ ಮತ್ತು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದಿತ್ತು. ಪ್ರಧಾನ ಮಂತ್ರಿಯಿಂದ ಪತ್ರಕ್ಕೆ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ ಎಂದು ಐಶ್ವರ್ಯಾ ಹೇಳಿದ್ದಾರೆ.
ಇದರ ಬೆನ್ನಲ್ಲೇ ಎರಡು ದಿನಗಳ ಹಿಂದೆ ತಿರುವನಂತಪುರ ಪುರಸಭೆಯ ಆರೋಗ್ಯ ಅಧಿಕಾರಿಯಿಂದ ಐಶ್ವರ್ಯ ಅವರಿಗೆ ಪತ್ರ ಬಂದಿತ್ತು. ಪುರಸಭೆಯ ಗಡಿಯುದ್ದಕ್ಕೂ ಬಸ್ ನಿಲ್ದಾಣಗಳು, ಆಸ್ಪತ್ರೆಗಳು, ಶಾಲೆಗಳು, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ 120 ಸ್ಯಾನಿಟರಿ ಪ್ಯಾಡ್ ಮಾರಾಟ ಯಂತ್ರಗಳು ಮತ್ತು ದಹನಕಾರಕಗಳನ್ನು ಅಳವಡಿಸಲಾಗಿದೆ ಮತ್ತು ಮನಕ್ಕಾಡ್ ಆರೋಗ್ಯ ನಿರೀಕ್ಷಕರ ಕಚೇರಿ ಬಳಿ ಪ್ಯಾಡ್ ಸಂಸ್ಕರಣ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. 2021-2022ನೇ ಸಾಲಿನ ಯೋಜನೆಯಲ್ಲಿ ಸೇರಿಸಲಾದ ಇತರ ಕಚೇರಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಇವುಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಲಾಗಿದೆ.





