ತಿರುವನಂತಪುರ: ಶಾಸಕರ ಆಸ್ತಿ ಅಭಿವೃದ್ಧಿ ನಿಧಿಯಲ್ಲಿ ಭಾರೀ ಪ್ರಮಾಣದ ಕಡಿತ ಮಾಡಲಾಗಿದ್ದು, ಇದರಿಂದ ಕ್ಷೇತ್ರಗಳ ಅಭಿವೃದ್ಧಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಬಗ್ಗೆ ಕಳವಳ ವ್ಯಕ್ತಗೊಂಡಿದೆ.
ಸ್ಥಳೀಯ ಅಭಿವೃದ್ಧಿ ನಿಧಿ ಮತ್ತು ಆಸ್ತಿ ಅಭಿವೃದ್ಧಿ ನಿಧಿ ಸೇರಿದಂತೆ 6 ಕೋಟಿ ರೂ.ಗಳನ್ನು ಕೇಂದ್ರವಾಗಿಸಿ ವಿಧಾನಸಭೆ ಚುನಾವಣೆಗೆ ಮುನ್ನ, ಶಾಸಕರು ಘೋಷಿಸಿದ ಯೋಜನೆಗಳು ವ್ಯರ್ಥವಾಗುತ್ತವೆ ಎಂಬ ಆತಂಕ ಹೆಚ್ಚುತ್ತಿದೆ. ಪ್ರಸ್ತುತ ಈ ನಿಧಿ 2 ಕೋಟಿ ರೂ.ಗಿಂತ ಕಡಿಮೆಯಿ ಇರುವುದು ಕಳವಳಕ್ಕೆ ಕಾರಣವಾಗಿದೆ.
5 ಕೋಟಿ ರೂ.ಗಳ ಆಸ್ತಿ ಅಭಿವೃದ್ಧಿ ನಿಧಿಯಲ್ಲಿ 4 ಕೋಟಿ ರೂ.ಗಳನ್ನು ಕೋವಿಡ್ ರಕ್ಷಣೆಗೆ ಮೀಸಲಿಡಲಾಗುವುದು ಎಂದು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಹೇಳಿದ್ದರು. ಶಾಸಕರ ಆಸ್ತಿ ಅಭಿವೃದ್ಧಿ ನಿಧಿಯನ್ನು ಕೋವಿಡ್ ರಕ್ಷಣೆಗೆ ಬಳಸಲಾಗುವುದು ಎಂದು ಬಜೆಟ್‍ನಲ್ಲೂ ಉಲ್ಲೇಖಿಸಲಾಗಿತ್ತು. ಬಜೆಟ್ ಚರ್ಚೆಗೆ ಉತ್ತರಿಸಿದ ಹಣಕಾಸು ಸಚಿವರು ಇದಕ್ಕಾಗಿ ಎಷ್ಟು ಹಣವನ್ನು ಖರ್ಚು ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಆಸ್ತಿ ಅಭಿವೃದ್ಧಿ ನಿಧಿ ಕಡಿತವನ್ನು ಮರುಪರಿಶೀಲಿಸುವಂತೆ ಪ್ರತಿಪಕ್ಷಗಳು ಒತ್ತಾಯಿಸಿದ್ದವು. ಆದರೆ ಸರ್ಕಾರ ಪ್ರತಿಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿದೆ. ಇದರ ಮೂಲಕ ಸರ್ಕಾರಕ್ಕೆ 560 ಕೋಟಿ ರೂ.ಲಭ್ಯವಾಗುತ್ತದೆ. ಈ ಹಣವನ್ನು ಆಯಾ ಕ್ಷೇತ್ರಗಳಲ್ಲಿ ಕೋವಿಡ್ ರಕ್ಷಣೆಗೆ ಖರ್ಚು ಮಾಡಲಾಗುತ್ತದೆಯೇ ಎಂದು ಪ್ರತಿ ಪಕ್ಷದ ಶಾಸಕರು ಪ್ರಶ್ನಿಸಿದ್ದಾರೆ.
ಕೆ.ಎಂ. ಮಣಿ ಹಣಕಾಸು ಸಚಿವರಾಗಿದ್ದಾಗ ಶಾಸಕರಿಗೆ 5 ಕೋಟಿ ರೂ.ಗಳನ್ನು ಆಸ್ತಿ ಅಭಿವೃದ್ಧಿ ನಿಧಿಯಾಗಿ ನೀಡಲಾಗಿತ್ತು.






