ಪೆರ್ಲ:ಪಡ್ರೆ ಸ್ವರ್ಗದ ಡಾ.ವೈಶಾಖ್ ಕೆದಂಬಾಯಿಮೂಲೆ ಅವರ 'ವಿಯರೇಬಲ್ ಟ್ಯಾಟೋ ಸೆನ್ಸರ್ಸ್' ನೂತನ ಸಂಶೋಧನೆಗೆ ರಾಷ್ಟ್ರೀಯ ಯುವ ಸಂಶೋಧಕ ಪ್ರಶಸ್ತಿ ಲಭಿಸಿದೆ.
ಎಂಜಿನಿಯರಿಂಗ್ ರಿಸರ್ಚ್ ಐದು ವರ್ಷಗಳ ಅವಧಿಯಲ್ಲಿ ಮೂರನೇ ರಾಷ್ಟ್ರೀಯ ಪ್ರಶಸ್ತಿ ಇದಾಗಿದ್ದು ವಿಶೇಷ ಸ್ಮರಣಿಕೆ, ಸರ್ಟಿಫಿಕೇಟ್ ಹಾಗೂ ಒಂದು ಲಕ್ಷ ರೂಪಾಯಿ ನಗದು ಒಳಗೊಂಡಿದೆ. ವೈಶಾಖ್ ಅವರು ಅತಿಸೂಕ್ಷ್ಮ ಗ್ರ್ಯಾಫಿನ್ ನಿಕಲ್ ಬಳಸಿ ಕ್ರಯೋಜನಿಕ್ ತಾಪಮಾನ ಸಂವೇದಕ ಆವಿಷ್ಕಾರಕ್ಕೆ ಉದಯೋನ್ಮುಖ ಸಂಶೋಧಕ(ಎನ್ ಆರ್ ಡಿಸಿ) ಪ್ರಶಸ್ತಿ ಹಾಗೂ ಅತಿ ಶೀತ ಹಾಗೂ ಅತಿ ಉಷ್ಣ ಸಂದರ್ಭದಲ್ಲಿ ಗ್ರ್ಯಾಫೀನ್ ಬಳಸಿ ಶರೀರದ ಉಷ್ಣತೆ ಕಾಪಾಡುವ 'ಬಾಡಿ ವಾರ್ಮರ್' ಸಂಶೋಧನೆಗೆ 'ಗಾಂಧಿಯನ್ ಯಂಗ್ ಇನ್ನೋವೇಟರ್' ಪ್ರಶಸ್ತಿ ಪಡೆದಿದ್ದರು.
ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆ ನಿವೃತ್ತ ಮುಖ್ಯ ಶಿಕ್ಷಕ ಕೆ.ವೈ.ಸುಬ್ರಹ್ಮಣ್ಯ ಭಟ್ ಹಾಗೂ ಹಾಲಿ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಅವರ ಪುತ್ರ ವೈಶಾಖ್ ಪ್ರಸ್ತುತ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆ(ಐ ಐ ಎಸ್ ಸಿ) ಯಲ್ಲಿ ರಿಸರ್ಚ್ ಅಸೋಸಿಯೇಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.





