ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಶನಿವಾರದಿಂದ ಕೇರಳಾದ್ಯಂತ ಸಂಪೂರ್ಣ ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕಾಸರಗೋಡು ನಗರದಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಆರಂಭಿಸಿದ್ದಾರೆ. ಕಾರಣವಿಲ್ಲದೆ ರಸ್ತೆಗಿಳಿಯುವ ವಾಹನ ಮಾಲಿಕರಿಗೆ ದಂಡ ವಿಧಿಸಲಾಗುತ್ತಿದೆ. ತುರ್ತು ಸೇವೆಗಳಿಗಾಗಿ ತೆರಳುವ ವಾಹನಗಳಿಗಷ್ಟೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಪೊಲೀಸರ ಕಟ್ಟುನಿಟ್ಟಿನ ನಿಯಂತ್ರಣದಿಂದ ಕಾಸರಗೋಡು ನಗರದಲ್ಲಿ ವಾಹನ ಹಾಗೂ ಜನಸಂಚಾರವಿಲ್ಲದೆ ಬರಿದಾಗಿತ್ತು. ಕಾರಣವಿಲ್ಲದೆ ಸುತ್ತಾಡುವ ವಾಹನಗಳನ್ನು ತಡೆದು ವಆಪಾಸುಕಳುಹಿಸುವ ದೃಶ್ಯ ಸಾಮಾನ್ಯವಾಗಿತ್ತು.
ಹೋಟೆಲ್ ಗಳಲ್ಲಿ ಪಾರ್ಸೆಲ್‍ಗೆ ಅನುಮತಿ ನಿರಾಕರಿಸಲಾಗಿದ್ದು, ಹೋಂ ಡೆಲಿವರಿ ಮಾತ್ರ ನಡೆಸಲು ಅನುಮತಿ ನೀಡಲಾಗಿದೆ. ಕಟ್ಟಡ ಕಾಮಗಾರಿ ನಿರ್ಮಾಣ ನಡೆಯುವ ಪ್ರದೇಶ ಬಳಿಯ ಪೆÇಲೀಸ್ ಠಾಣೆಯಿಂದ ಮುಂಗಡ ಅನುಮತಿ ಪಡೆದು ಕೆಲಸ ನಡೆಸುವಂತೆಯೂ ಸೂಚಿಸಲಾಗಿತ್ತು. ಅನಿವಾರ್ಯ ಸಾಮಾಗ್ರಿಗಳಿಗೆ ಮಾತ್ರ ರಿಯಾಯಿತಿ ಕಲ್ಪಿಸಲಾಗಿದ್ದು, ಆಹಾರ ಪದಾರ್ಥಗಳು, ಧಾನ್ಯಗಳು, ತರಕಾರಿ, ಹಾಲು, ಮೀನು,ಮಾಂಸ ಮಾರಾಟ ಕೇಂದ್ರಗಳು, ಬೇಕರಿಗಳು ಇತ್ಯಾದಿಗಳು ಬೆಳಗ್ಗೆ 7 ರಿಂದ ಸಂಜೆ 7 ಗಂಟೆ ವರೆಗೆ ತೆರೆದುಕಾರ್ಯಾಚರಿಸುವಂತೆ ಸೂಚಿಸಲಾಗಿದೆ.




