ಪ್ರಸಿದ್ಧ ತಮಿಳು ಬರಹಗಾರ್ತಿ ಭಾಮಾ ಅವರ ಕಾದಂಬರಿಯಲ್ಲಿ ಒಬ್ಬ ದಲಿತ ಅಜ್ಜಿ ಹೇಳುತ್ತಾಳೆ: ಏನೇ ಆಗಲಿ ನೀವು ದಲಿತ ಹೆಣ್ಣು ಮಕ್ಕಳನ್ನು ಹಾಡು ಹೇಳದೆ ಇರುವಂತೆ ತಡೆಯಲು ಸಾಧ್ಯವಿಲ್ಲ. ಈ ಮಾತಿನ ಹಿಂದೆ ನನಗೆ ಯಾವಾಗಲೂ ಕಂಡಿದ್ದು, ಯಾವುದನ್ನು ನಾವು ಅಲಕ್ಷಿತ ಸಮುದಾಯಗಳು ಎಂದು ಕರೆಯುತ್ತೇವೆಯೋ ಆ ಸಮುದಾಯಗಳಲ್ಲಿ ಅಪೂರ್ವವಾದ ಕಾವ್ಯ ಶ್ರದ್ಧೆ ಇದೆ. ಜಗತ್ತನ್ನು ಕಾವ್ಯದಿಂದಲೇ ನೋಡಬೇಕು, ಕಾವ್ಯದೊಳಗೆಯೇ ಅರ್ಥ ಮಾಡಿಕೊಳ್ಳಬೇಕು ಅನ್ನುವ ನಂಬಿಕೆ ಇದೆ. ಕವಿ ಸಿದ್ದಲಿಂಗಯ್ಯನವರು ನನಗೆ ಈ ಮಹಾನ್ ಸಂಪ್ರದಾಯದ ಪ್ರತಿನಿಧಿಯಾಗಿ ಕಾಣುತ್ತಾರೆ.
ಸಿದ್ಧಲಿಂಗಯ್ಯ ಒಂದು ಬಹುದೊಡ್ಡ ಸಾಂಸ್ಕೃತಿಕ ಚಳವಳಿಯನ್ನು ಕಾವ್ಯದ ಕಣ್ಣಿನಿಂದ ನೋಡುವುದು ಸಾಧ್ಯವಾಯಿತು. ಅವರು ಕಾವ್ಯಕ್ಕೆ ಕಂಡುಕೊಂಡ ಸಾಮರ್ಥ್ಯಗಳನ್ನು ನೆನಪು ಮಾಡಿಕೊಳ್ಳುವುದು ಈಗಲೂ ಅಚ್ಚರಿ ಎನಿಸುತ್ತದೆ. ಅವರ ಹಾಡುಗಳು ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿದವು. ಅವರ ಹಾಡುಗಳು ಅಂತಿಮವಾದ ಸಮಾನತೆ ಮತ್ತು ಮನುಷ್ಯರ ಬಾಂಧವ್ಯಗಳನ್ನೇ ಕೇಂದ್ರವಾಗಿಟ್ಟುಕೊಂಡು ಹುಟ್ಟಿದ ದಲಿತ ಚಳವಳಿಯ ಮೂಲಸೆಲೆಯಾದವು.
ಈ ಕಾವ್ಯ ಪ್ರತಿಭಟನೆಯ ಶಕ್ತಿಯನ್ನು ಸಮಾಜಕ್ಕೆ ನೀಡಿದ್ದು, ಸಾವಿರಾರು ವರ್ಷಗಳಿಂದ ಪದಗಳಿಲ್ಲದೆ ಮೌನವಾಗಿದ್ದ ಆಕ್ರೋಶಕ್ಕೆ ಅಭಿವ್ಯಕ್ತಿಯಾಯಿತು. ಈ ಕಾವ್ಯ ಕನ್ನಡದ ಲಯಗಳನ್ನು ಅನೇಕ ಸ್ತರಗಳಲ್ಲಿ ಅದ್ಭುತವಾಗಿ ಬಳಸಿಕೊಂಡಿತು. ಅವರು ಬರೆದದ್ದು ಅಪ್ಪಟ ಕಾವ್ಯ. ಏಕೆಂದರೆ ಈ ಕಾವ್ಯದ ಹೆಣಿಗೆಯೊಳಗೆ ರೂಪಕಗಳಿವೆ, ಪ್ರತಿಮೆಗಳಿವೆ, ಸೂಕ್ಷ್ಮ ಭಾವನೆಗಳನ್ನು ಹೇಳುವ ದಾಟಿಗಳಿವೆ. ಅವರ ಹಾಡುಗಳು ಎಷ್ಟು ಪ್ರಭಾವಿಯಾಗಿದ್ದವು ಎಂದರೆ ಆ ಹಾಡುಗಳಿಲ್ಲದೆ ಅಂದಿನ ಪ್ರತಿಭಟನಾ ಸಭೆಗಳು ಪ್ರಾರಂಭವಾಗುವುದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿರಲಿಲ್ಲ. ಒಂದು ರೀತಿಯಲ್ಲಿ ಒಂದು ಆಚರಣೆಯ ಭಾಗವೇ ಆಗಿಬಿಟ್ಟಿತ್ತು. ಏಕೆಂದರೆ ಮುಂದೆ ನಡೆಯುವ ಪ್ರತಿಭಟನೆಗೆ ಒಂದು ಭಾವ ಸಂದರ್ಭವನ್ನು ಅವು ಹಾಕಿಕೊಡುತ್ತಿದ್ದವು. ಹೀಗಾಗಿ ಆ ಹಾಡು ಹೇಳುವ ಕ್ಷಣಗಳಲ್ಲಿ ಭಾವನೆ, ಸಿದ್ಧಾಂತ ಮತ್ತು ಕ್ರಿಯೆಗಳು ಒಗ್ಗೂಡಿದಂತೆ ಆಗುತ್ತಿತ್ತು. ಈಗಲೂ ಕೂಡ ಜನ್ನಿಯವರ ದನಿಯಲ್ಲಿ 'ನಿನ್ನೆ ದಿನ ನನ್ನ ಜನ' ಹಾಡನ್ನು ಕೇಳಿದರೆ ಪ್ರತಿಭಟನೆ ಎನ್ನುವ ಅಲೆಗಳಲ್ಲಿ ತೇಲಿಬರುತ್ತಿರುವ ಜನಸಮುದಾಯಗಳು ಕಣ್ಣೆದುರಿಗೆ ನಿಲ್ಲುತ್ತವೆ.
ಆ ಪದ್ಯದೊಳಗೆ ಕವಿ ತನ್ನ ಜನರನ್ನು ಪ್ರತಿಮೆಗಳ ಮೂಲಕ ಮರುಜನ್ಮ ಕೊಟ್ಟು ನೋಡುವುದು ಏನೋ ಒಂದು ಪವಾಡವೆನಿಸುತ್ತದೆ. ಹಾಗೆಯೇ 'ದೊಡ್ಡ ಗೌಡರ ಬಾಗಿಲಿನ ವರ್ಣನೆ, ಸೈಜುಗಲ್ಲು ಹೊತ್ತವರ ವರ್ಣನೆ'-ಇವೆಲ್ಲ ಕನ್ನಡ ಕಾವ್ಯಕ್ಕೆ ಒಂದು ಹೊಸ ಅನುಭವ ಲೋಕವನ್ನು ಅತ್ಯಂತ ಪ್ರಭಾವಶಾಲಿಯಾಗಿ ತಂದವು. ಜೊತೆಗೆ ಈ ಹಾಡುಗಳನ್ನು ಬರೆದ ಕವಿ ಒಬ್ಬ ಹೋರಾಟಗಾರರೂ ಆಗಿದ್ದರು. ಇವರು ಮಾಡಿದ ಹೋರಾಟಗಳನ್ನು ಅವರ ಮಾತಿನಲ್ಲಿಯೇ ಓದಿದಾಗ ಪ್ರತಿಭಟನೆಯ ವಿಶಿಷ್ಟ್ಯ ನೆಲೆಗಳನ್ನು ನೋಡಬಹುದಾಗಿದೆ.
ಇಲ್ಲಿ ಹೋರಾಟವೆನ್ನುವುದು ಕೇವಲ, ಎದುರು ನಿಂತು ಮಾಡುವ ಯುದ್ಧವಲ್ಲ, ಅದರಲ್ಲಿ ತಂತ್ರಗಾರಿಕೆ ಇದೆ, ಜೀವಸ್ಪರ್ಶವಿದೆ, ಸಹಜತೆಯೂ ಇದೆ. ಎಷ್ಟೋ ಬಾರಿ ದೈಹಿಕ ಆಕ್ರಮಣ ಆಗುವ ಸಂದರ್ಭದಲ್ಲೂ ಇವರ ಹಾಸ್ಯ ಪ್ರಜ್ಞೆ ಆ ಹೋರಾಟಗಳಲ್ಲಿ ಕೆಲಸ ಮಾಡುತ್ತಿತ್ತು. ಇದು ಒಂದು ಕಡೆ ಅವರ ವ್ಯಕ್ತಿತ್ವದ ಲಕ್ಷಣವಾಗಿದ್ದರೆ ಇನ್ನೊಂದು ಕಡೆ ಹೋರಾಟಗಳ ಹೊಸ ಪಾಠಗಳನ್ನು ಹೇಳಿಕೊಡುತ್ತಿತ್ತು. ಭಾರತದ ಅನೇಕ ಭಾಷೆಗಳಲ್ಲಿ ಬಂದಿರುವ ದಲಿತ ಹೋರಾಟ ಕಥನಗಳನ್ನು ನೋಡಿದಾಗ ಈ ತಂತ್ರಗಾರಿಕೆ ಈ ಜಾಣತನ ಇಲ್ಲದಿದ್ದರೆ ದಲಿತ ಹೋರಾಟಗಳು ಸೋಲುತ್ತಿದ್ದವು ಎನ್ನುವುದು ಗೊತ್ತಾಗುತ್ತದೆ.
ಸಿದ್ದಲಿಂಗಯ್ಯನವರ ಕಾವ್ಯದಷ್ಟೇ ಮುಖ್ಯವಾದದ್ದು, ಅವರ ಗದ್ಯಬರಹ ಮತ್ತು ಅವರ ಆತ್ಮಕತೆ 'ಊರು-ಕೇರಿ'. ವಿಮರ್ಶಕ ಡಿ.ಆರ್.ನಾಗರಾಜ್ ಹೇಳಿದ ಹಾಗೆ, 'ಸಿದ್ದಲಿಂಗಯ್ಯನವರ ಗದ್ಯ ಬರಹ ಕಲಿಸಿಕೊಟ್ಟಿದೇನೆಂದರೆ, ನಗೆ ಮತ್ತು ಹಾಸ್ಯಗಳು ಅದ್ಭುತ ಪ್ರತಿಭಟನೆ ಆಗಬಲ್ಲವು'. ಅಲ್ಲದೆ ಅವರ ಹಾಸ್ಯ ವ್ಯವಸ್ಥೆಯ ಧರ್ಮವನ್ನು ಛೇಡಿಸುವ ಮತ್ತು ವಿಮರ್ಶಿಸುವ ರೀತಿಯದ್ದಾಗಿತ್ತು. ಅವರು ಗ್ರಾಮೀಣ ದೇವತೆಗಳ ಮೂಲಕ ಅವರ ಕತೆಗಳ ಮೂಲಕ ಒಂದು ಪರ್ಯಾಯ ಲೋಕವನ್ನು ನಮಗೆ ಕಟ್ಟಿಕೊಟ್ಟರು. ಈ ಪರ್ಯಾಯ ಲೋಕ ಸಮಾನತೆ, ಅತಃಕರಣ ಮತ್ತು ನ್ಯಾಯಬದ್ಧತೆಯ ಮೌಲ್ಯಗಳನ್ನು ಪ್ರತಿಪಾದಿಸುವ ಲೋಕವಾಗಿದೆ. ಅವುಗಳ ಮೂಲಕ ಶಿಷ್ಟ ಸಂಸ್ಕೃತಿಯ ಅನೇಕ ರಚನೆಗಳನ್ನು ಸಿದ್ದಲಿಂಗಯ್ಯನವರು ಮುರಿದರು. ಅಲ್ಲದೆ ನೂರು ಮಾತುಗಳಲ್ಲಿ ಹೇಳಲಾಗದ್ದನ್ನು ಒಂದು ಕತೆ ಮೂಲಕ ಹೇಳುವ ಸಾಮರ್ಥ್ಯ ಅವರದ್ದಾಗಿತ್ತು. ಅವರ ಆತ್ಮಕತೆ ನೋವು ಮತ್ತು ಅವಮಾನಗಳನ್ನು ಎದುರಿಸಿ ಗೆಲ್ಲುವ ಕಥನವಾಗಿದೆ. ಹಾಗೆ ನೋಡಿದರೆ ಅನೇಕ ಭಾರತೀಯ ಭಾಷೆಗಳಲ್ಲಿ ಬಂದಿರುವ ದಲಿತ ಆತ್ಮಕತೆಗಳಲ್ಲಿಯೇ ಸಿದ್ದಲಿಂಗಯ್ಯನವರ ಆತ್ಮಕಥನ ಅತ್ಯಂತ ವಿಶಿಷ್ಟವಾಗಿದೆ. ಅದು ದಲಿತ ಆತ್ಮಕಥನಗಳಿಗೆ ಹೊಸ ಮಾದರಿಯನ್ನು ಕಲ್ಪಿಸಿಕೊಟ್ಟಿದೆ.
ಕೆಲವೊಮ್ಮೆ ಅನ್ನಿಸುತ್ತದೆ ಅವರ ಮಾತುಗಾರಿಕೆ ಮತ್ತು ಭಾಷಣಗಳಲ್ಲಿ ಅವರ ಅದ್ಭುತ ಪ್ರತಿಭೆ ಹರಿದುಹೋಯಿತು ಎಂದು. ಅವರ ಸಂಭಾಷಣೆಯಲ್ಲಿಯೂ ಕಾಣುತ್ತಿದ್ದ 'ಡಿಜಿಠಿ' ಅಪರೂಪ ಗುಣದ್ದು. ಒಂದು ಮಾತಿನಲ್ಲಿಯೇ ಹಲವು ಅರ್ಥಗಳನ್ನು ಕೊಡುವಂತಹದ್ದು. ಹೀಗಾಗಿ ಒಬ್ಬ ಕವಿಯಾಗಿ, ಹೋರಾಟಗಾರರಾಗಿ, ಬರಹಗಾರರಾಗಿ ಕವಿ ಸಿದ್ದಲಿಂಗಯ್ಯ ತೋರಿದ ಅಪಾರ ಜೀವಂತಿಕೆ ಮತ್ತು ಲವಲವಿಕೆಗಳು ಕನ್ನಡ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿವೆ.





