ಕಾಸರಗೋಡು: ಆಲಂಪಾಡಿ, ಚೆರುವತ್ತೂರು ಶಾಲೆ ಕಟ್ಟಡಗಳು ನಿರ್ಮಾಣ ಪೂರ್ತಿಗೊಂಡು ಉದ್ಘಾಟನೆಗೆ ಸಿದ್ಧವಾಗಿವೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಈ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಚೆಂಗಳ ಗ್ರಾಮ ಪಂಚಾಯತ್ ನ ಆಲಂಪಾಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಮತ್ತು ಚೆರುವತ್ತೂರು ಗ್ರಾಮ ಪಂಚಾಯತ್ ನ ಸರಕಾರಿ ವೆಲ್ಫೇರ್ ಹಿರಿಯ ಪ್ರಾಥಮಿಕ ಶಾಲೆಗಳ ನೂತನ ಕಟ್ಟಡಗಳ ನಿರ್ಮಾಣ ಪೂರ್ಣಗೊಂಡಿವೆ.
ಆಲಂಪಾಡಿ ಶಾಲೆಯ ಕಿರಿಯ ಪ್ರಾಥಮಿಕ ವಿಭಾಗದಲ್ಲಿ 8 ತರಗತಿ ಕೊಠಡಿಗಳಿರುವ ಎರಡು ಅಂತಸ್ತಿನ ಕಟ್ಟಡ ಈಗ ಉದ್ಘಾಟನೆಗೆ ಸಿದ್ಧಗೊಂಡಿದೆ. 1.10 ಕೋಟಿ ರೂ. ಈ ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿತ್ತು. ಈ ಹಿಂದೆ ಇಲ್ಲಿ ಕಟ್ಟಡ ಸೌಲಭ್ಯಗಳ ಕೊರತೆ ಕಾಡುತ್ತಿತ್ತು.
ಚೆರುವತ್ತೂರು ಶಾಲೆಯಲ್ಲಿ 4 ತರಗತಿ ಕೊಠಡಿಗಳಿರುವ ನೂತನ ಕಟ್ಟಡ ಸಿದ್ಧವಾಗಿದೆ. ಈ ನಿರ್ಮಾಣಕ್ಕಾಗಿ 40 ಲಕ್ಷ ರೂ. ಮಂಜೂರು ಮಾಡಲಾಗಿತ್ತು. 6.10 ಮೀಟರ್ ಉದ್ದ, 6.10 ಮೀಟರ್ ಅಗಲದ 4 ತರಗತಿಗಳನ್ನು ಇಲ್ಲಿ ನಿರ್ಮಿಸಲಾಗಿದೆ.
ಉಭಯ ಶಾಲೆಗಳಲ್ಲಿನ ಕೊರತೆಗಳು ಅಕಾಡೆಮಿಕ್ ಫಲಿತಾಂಶಕ್ಕೆ ತೊಡಕಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಟ್ಟಡಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಶೀಘ್ರದಲ್ಲೇ ಈ ಕಟ್ಟಡಗಳ ಉದ್ಘಾಟನೆ ನಡೆಸಲಾಗುವುದು ಎಂದು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ತಿಳಿಸಿದರು.






