ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ವಿಶೇಷಚೇತನರಿಗೆ ಮತ್ತು ಹಾಸುಗೆ ಹಿಡಿದಿರುವ ರೋಗಿಗಳಿಗೆ ಮನೆಗೆ ತೆರಳಿ ವಾಕ್ಸಿನೇಷನ್ ಪ್ರಕ್ರಿಯೆ ಶನಿವಾರ ಆರಂಭಗೊಂಡಿದೆ.
ಕಾಸರಗೋಡು ನಗರಸಭೆಯ ಒಂದನೇ ವಾರ್ಡ್ ಚೇರಂಗಾಯಿ ಕರಾವಳಿಯ ನಿವಾಸಿ, ಹಾಸುಗೆ ಹಿಡಿದಿರುವ ರೋಗಿ ಅಬ್ದುಲ್ ರಹೀಂ ಅವರಿಗೆ ಕೋವಾಕ್ಸಿನ್ ಲಸಿಕೆ ನೀಡಿಕೆ ಮೂಲಕ ಈ ಚಟುವಟಿಕೆಗಳಿಗೆ ಚಾಲನೆ ಲಭಿಸಿದೆ.
ಕಾಸರಗೋಡು ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್ ಅವರು ವಾಕ್ಸಿನೇಷನ್ ಮೊಬೈಲ್ ಯೂನಿಟ್ ಉದ್ಘಾಟಿಸಿದರು. ಉಪಾಧ್ಯಕ್ಷೆ ಷಂಸೀದಾ ಫಿರೋಝ್, ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷ ರುಗಳಾದ ಖಾಲಿದ್, ಅಬ್ಬಾಸ್ ಬೀಗಂ, ರಜನಿ, ಸಿಯಾನಾ ಹನೀಫ್, ವಾರ್ಡ್ ಸದಸ್ಯ ಮುಸ್ತಾಕ್ ಮೊದಲಾದವರು ಉಪಸ್ಥಿತರಿದ್ದರು.
ಒಂದು ವಾರದ ಅವಧಿಯಲ್ಲಿ ನಗರಸಭೆ ವ್ಯಾಪ್ತಿಯ ಹಾಸುಗೆ ಹಿಡಿದಿರುವ ಎಲ್ಲ ರೋಗಿಗಳಿಗೆ ವಾಕ್ಸಿನೇಷನ್ ನಡೆಸಲಾಗುವುದು. ಹಾಸುಗೆ ಹಿಡಿದವರು ಮತ್ತು ವಿಶೇಷಚೇತನತೆಯ ಪರಿಣಾಮ ವಾಕ್ಸಿನೇಷನ್ ಕೇಂದ್ರಗಳಿಗೆ ತೆರಳಲಾಗದೇ ಇರುವ ಮಂದಿಗೆ ಈ ಸೌಲಭ್ಯ ಒದಗಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ನ್ಯಾಯವಾದಿ ವಿ.ಎಂ.ಮುನೀರ್ ನುಡಿದರು.
ಎಲ್ಲ ವಿಶೇಷಚೇತನರ ಕೋವಿನ್ ಪೆÇೀರ್ಟಲ್ ನೋಂದಣಿ ಈಗಾಗಲೇ ನಡೆಸಲಾಗಿದೆ. ಕಾಸರಗೋಡು ಜಿಲ್ಲಾಡಳಿತದ ಆದೇಶ ಪ್ರಕಾರ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ, ನಗರಸಭೆಗಳಲ್ಲಿ ಸಮಾಜನೀತಿ ಇಲಾಖೆ, ಕೇರಳ ಸಮಾಜ ಸುರಕ್ಷೆ ಮಿಷನ್, ಅಕ್ಕರ ಫೌಂಡೇಷನ್, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಗಳ ಸಹಕಾರದೊಂದಿಗೆ ವಿವಿಧ ಕಾಲೇಜುಗಳ ಎನ್.ಎಸ್.ಎಸ್. ಸ್ವಯಂಸೇವಕರ ಬೆಂಬಲದೊಂದಿಗೆ ಆರಂಭಿಸಲಾದ ವಿಶೇಷಚೇತನರ ಸಹಾಯ ಕೇಂದ್ರಗಳ ಮೂಲಕ ಇದು ಜರುಗಿದೆ. ಜಿಲ್ಲಾಡಳಿತದ ವೀ ಡಿಸರ್ವ್ ಯೋಜನೆ ಮೂಲಕ ಪತ್ತೆಮಾಡಲಾದ ಮಂದಿಗೆ ಆದ್ಯತೆ ನೀಡಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲೂ ಹೆಲ್ಪ್ ಡೆಸ್ಕ್ ಚಟುವಟಿಕೆ ನಡೆಸುತ್ತಿದೆ. ಈ ರೀತಿ ನೋಂದಣಿ ಪೂರ್ಣಗೊಂಡಿರುವ ವಿಶೇಷಚೇತನರ ಮಾಹಿತಿಗಳನ್ನು ಸಂಗ್ರಹಿಸಿ ವಾರ್ಟ್ ಮಟ್ಟದ ರೂಟ್ ಮಾಪ್ ಸಿದ್ಧಪಡಿಸಿ ಮನೆಗಳಿಗೇ ತೆರಳಿ ಲಸಿಕೆ ನೀಡಲಾಗುತ್ತಿದೆ.
ಕಾಸರಗೋಡು ವಾಕ್ಸಿನೇಷನ್ ಮೊಬೈಲ್ ಯೂನಿಟ್ ಗೆ ಕೇರಳ ಸಮಾಜ ಸುರಕ್ಷೆ ಮಿಷನ್ ವಯೋಮಿತ್ರ ವೈದ್ಯಾಧಿಕಾರಿ ಡಾ.ಆಸಿಯಾ ಷಫೀಕ್ ನೇತೃತ್ವ ನೀಡುತ್ತಿದ್ದಾರೆ. ಇದಕ್ಕೆ ಬೇಕಿರುವ ಎಲ್ಲ ಮಾರ್ಗದರ್ಶನವನ್ನೂ, ವಾಕ್ಸಿನ್ ಸಹಿತ ಸೌಲಭ್ಯಗಳನ್ನು ಆರೋಗ್ಯ ಇಲಾಖೆ ಒದಗಿಸುತ್ತಿದೆ. ವಯೋಮಿತ್ರ ಯೋಜನೆಯ ಸ್ಟಾಫ್ ನರ್ಸ್ ಗೀತೂ ಶ್ರೀಧರ್, ಪಾಲಿಯೇಟಿವ್ ನರ್ಸ್ ಸುಶ್ಮಿತಾ, ಎಲ್.ಎಚ್.ಐ. ಜಲಜಾ, ಜೆ.ಪಿ.ಎಚ್.ಎಲ್.ಅನುಶ್ರೀ ಈ ಯೂನಿಟ್ ನ ಸದಸ್ಯೆಯರಾಗಿದ್ದಾರೆ. ಆಶಾ ಕಾರ್ಯಕರ್ತರಾದ ನದೀಷಾ, ರಜಿತಾ, ಅಂಜು, ಚಿತ್ರಾ ಸಜಿತ್ ಮೊದಲಾದವರು ರೂಟ್ ಮಾಪ್ ಸಿದ್ಧಗೊಳಿಸಲು , ವಿಶೇಷಚೇತನರನ್ನು, ಹಾಸುಗೆ ಹಿಡಿದ ರೋಗಿಗಳಿಗೆ ಲಸಿಕೆ ನೀಡಲು ಮನೆಗಳಲ್ಲಿ ಬೇಕಾದ ಸಜ್ಜೀಕರಣಕ್ಕೆ ಸಹಾಯ ಒದಗಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಸಮಾಜ ನೀತಿ ಇಲಾಖೆಯಿಂದ ಲಭಿಸುವ ನೋಂದಣಿ ಪಟ್ಟಿ ಪ್ರಕಾರ ವಯೋಮಿತ್ರ ಕಾಞಂಗಾಡು, ನೀಲೇಶ್ವರ ಯೂನಿಟ್ ಗಳೂ ಸಹ ಮೊಬೈಲ್ ವಾಕ್ಸಿನೇಷನ್ ಆರಂಭಿಸಲಿವೆ ಎಂದು ಕೇರಳ ಸಮಾಜ ಸುರಕ್ಷೆ ಮಿಷನ್ ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್ ತಿಳಿಸಿದರು.




