ನವದೆಹಲಿ: ಗ್ರಾಮೀಣ, ಬುಡಕಟ್ಟು, ದೂರದ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿನ ಕಳಪೆ ಡಿಜಿಟಲ್ ಸಂಪರ್ಕ ನಿವಾರಿಸಲು ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಪತ್ರ ಬರೆದಿದ್ದಾರೆ.
ಡಿಜಿಟಲ್ ವಿಭಜನೆಯನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿಗಳು, ಹಳ್ಳಿಗಾಡಿನಲ್ಲಿರುವ ಕಳಪೆ ಡಿಜಿಟಲ್ ಸಂಪರ್ಕವು ನ್ಯಾಯ ವಿತರಣೆಯ ವೇಗದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ತಂತ್ರಜ್ಞಾನದ ಅಸಮಾನತೆಯಿಂದಾಗಿ ಇಡೀ ಪೀಳಿಗೆಯ ವಕೀಲರನ್ನು ವ್ಯವಸ್ಥೆಯಿಂದ ಹೊರಗಿಡಲಾಗುತ್ತಿದೆ. ದೇಶದಾದ್ಯಂತದ ಸಾವಿರಾರು ಯುವ ವಕೀಲರನ್ನು ಅವರ ಜೀವನೋಪಾಯದಿಂದ ವಂಚಿತಗೊಳಿಸುತ್ತಿದೆ' ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಅವರು ಬರೆದಿರುವ 'ಕಾನೂನು ಮತ್ತು ನ್ಯಾಯದಲ್ಲಿನ ವೈಪರೀತ್ಯಗಳು' ಪುಸ್ತಕ ಬಿಡುಗಡೆಯ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.
ಪುಸ್ತಕದ ಬಿಡುಗಡೆಯ ನಂತರ ನಡೆದ ಚರ್ಚೆಯ ಸಂದರ್ಭದಲ್ಲಿ ಅವರು, ಇತ್ತೀಚೆಗೆ ನಡೆಸಿದ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ಎರಡು ದಿನಗಳ ಸಮ್ಮೇಳನದಲ್ಲೂ ಡಿಜಿಟಲ್ ಸಂಪರ್ಕದ ವಿಷಯವು ಪ್ರಮುಖವಾಗಿ ಚರ್ಚೆಯಾಯಿತು ಎಂದು ತಿಳಿಸಿದ್ದಾರೆ.
ಕಾನೂನು, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಿಗೆ ಡಿಜಿಟಲ್ ವಿಭಜನೆಯನ್ನು ನಿವಾರಿಸಲು ಆದ್ಯತೆಯ ಕ್ರಮಗಳನ್ನು ಕೈಗೊಳ್ಳುವಂತೆ ಇತ್ತೀಚೆಗೆ ವಿನಂತಿಸಿಕೊಳ್ಳಲಾಗಿದೆ. ಕೋವಿಡ್ ಸಾಂಕ್ರಾಮಿಕದಿಂದ ಜೀವನೋಪಾಯ ಕಳೆದುಕೊಂಡಿರುವ ವಕೀಲರಿಗೆ ಮತ್ತು ಹಣಕಾಸಿನ ನೆರವಿನ ಅಗತ್ಯವಿರುವವರಿಗೆ ಸಹಾಯ ಮಾಡುವ ಕಾರ್ಯವಿಧಾನ ರೂಪಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ರಮಣ ತಿಳಿಸಿದ್ದಾರೆ.
ಕಾನೂನು ವೃತ್ತಿಪರರು ಮತ್ತು ಈ ಕ್ಷೇತ್ರಕ್ಕೆ ಸಂಬಂಧಿಸಿದವರನ್ನು ಮುಂಚೂಣಿ ಕೆಲಸಗಾರರೆಂದು ಘೋಷಿಸುವ ಅಗತ್ಯತೆ ಇದೆ. ಅಲ್ಲದೇ ಅವರೆಲ್ಲರಿಗೂ ಆದ್ಯತೆಯ ಮೇರೆಗೆ ಲಸಿಕೆ ಹಾಕುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.





