ಮಂಗಳೂರು: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದ ಎರಡು ನೂತನ ಕೃತಿಗಳ ಲೋಕಾರ್ಪಣವು ಅಂತರ್ ಜಾಲ ಕಾರ್ಯಕ್ರಮದ ಮೂಲಕ ಏರ್ಪಟ್ಟಿತು. ಪುತ್ತೂರು ಸಮೀಪದ ಮಿತ್ತೂರಿನ ’ಅನೂಚಾನನಿಲಯ’ದಲ್ಲಿ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು.
ಡಾ. ಪಾದೇಕಲ್ಲು ವಿಷ್ಣು ಭಟ್ ಅವರು ನಾಡಿನ ಸಾಧಕರ ಬಗ್ಗೆ ಬರೆದ ’ಹಿರಿಯರಿವರು’ ಮತ್ತು ಡಾ. ಬಡೆಕ್ಕಿಲ ಶ್ರೀಧರ ಭಟ್ ಸಂಗ್ರಹಿಸಿದ ’ಬಡೆಕ್ಕಿಲ ವಂಶಾವಳಿ’ ಕೃತಿಗಳ ಬಗ್ಗೆ ಡಾ. ಶ್ರೀಶಕುಮಾರ್ ಪುತ್ತೂರು ಮತ್ತು ಡಾ. ವಸಂತಕುಮಾರ ಪೆರ್ಲ ಅವರು ಮಾತಾಡಿದರು. ವಂಶಾವಳಿ ಎಂಬುದು ಚರಿತ್ರೆಯ ಭಾಗವಾಗಿದೆ, ಆದರೆ ಇವು ಕಿರುಚರಿತ್ರೆಗಳು. ಸ್ಥಳೀಯ ಇತಿಹಾಸದ ಭಾಗವಾಗಿ ಇಂಥವನ್ನು ತಿಳಿದುಕೊಳ್ಳುವುದು ಅವಶ್ಯ ಎಂದು ಡಾ. ಶ್ರೀಶಕುಮಾರ್ ಹೇಳಿದರು.
’ಹಿರಿಯರಿವರು’ ಕೃತಿಯ ಕುರಿತು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಅವರು ಮಾತಾಡಿದರು. ನಮ್ಮ ಹಿಂದಿನ ತಲೆಮಾರಿನ ಸಾಧಕರ ಬಗ್ಗೆ ನಾವು ತಿಳಿದುಕೊಳ್ಳುವುದು ಅವಶ್ಯ. ಅದು ನಮಗೆ ಪ್ರಭಾವ ಪ್ರೇರಣೆ ಕೊಡುತ್ತದೆ. ಮುಂದೆ ಸಾಗುವ ಬೆಳಕನ್ನು ನೀಡುತ್ತದೆ. ಸಾಧಕರು ಸಾಗಿದ ಹಾದಿಯಲ್ಲಿ ನಾವು ನಡೆದಾಗ ನಾಡು ಸಂಪದ್ಭರಿತವಾಗುತ್ತದೆ ಎಂದು ಡಾ. ಪೆರ್ಲ ಅವರು ಹೇಳಿದರು.
ಕೃತಿಕಾರರಾದ ಡಾ. ಶ್ರೀಧರ ಭಟ್ ಬಡೆಕ್ಕಿಲ ಮತ್ತು ಡಾ. ಪಾದೇಕಲ್ಲು ವಿಷ್ಣು ಭಟ್ಟರು ಕೃತಿ ಬರೆಯಲು ಕಾರಣವಾದ ಅಂಶಗಳನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿತ್ತೂರು ಸಂಪ್ರತಿಷ್ಠಾನದ ಅಧ್ಯಕ್ಷ ರಮೇಶ ಭಟ್ಟ ಬೈಪದವು ಅವರು ವಹಿಸಿದ್ದರು. ಪರಂಪರೆಯ ಹಿರಿಮೆಯನ್ನು ಎತ್ತಿ ಹಿಡಿಯುವ ಮತ್ತು ಸಂಸ್ಕøತಿಪರವಾದ ಅಮೂಲ್ಯ ಕೃತಿಗಳನ್ನು ಸಂಪ್ರತಿಷ್ಠಾನವು ಪ್ರಕಟಿಸುತ್ತ ಬಂದಿದ್ದು, ಇದುವರೆಗೆ ಅಂತಹ ಸುಮಾರು ಐವತ್ತು ಕೃತಿಗಳನ್ನು ಪ್ರಕಟಿಸಲಾಗಿದೆ ಎಂದರು.
ಸಂಪ್ರತಿಷ್ಠಾನದ ಸಂಚಾಲಕರಾದ ಮಿತ್ತೂರು ತಿರುಮಲೇಶ್ವರ ಭಟ್ಟ ಮತ್ತು ಮಿತ್ತೂರು ಮುರಳೀಕೃಷ್ಣ ಶರ್ಮ ವೈದಿಕ ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮದ ಮೊದಲಿಗೆ ಬಡೆಕ್ಕಿಲದ ಕುಮಾರಿ ಸಾನ್ವಿ ಭಟ್ ಪ್ರಾರ್ಥಿಸಿದರು. ಶ್ರೀಹರಿ ಪಾದೇಕಲ್ಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಂಪ್ರತಿಷ್ಠಾನದ ಕಾರ್ಯದರ್ಶಿಗಳಾದ ಎಚ್. ಎಂ ರಮೇಶ್ ಭಟ್ ವಂದಿಸಿದರು.




