ತಿರುವನಂತಪುರಂ: ಕೊರೊನಾ ಸೋಂಕಿನ ಏರಿಕೆ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವನ್ನು ತಿಂಗಳ ಪೂಜೆಯ ಪ್ರಯುಕ್ತ ಜುಲೈ 16 ರಿಂದ 21ರವರೆಗೂ ತೆರೆಯಲಾಗುತ್ತಿದೆ.
ಈ ಐದು ದಿನಗಳ ಸಮಯದಲ್ಲಿ ಕೆಲವು ನಿಬಂಧನೆಗಳೊಂದಿಗೆ ಭಕ್ತರಿಗೆ ದೇಗುಲ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಶನಿವಾರ ದೇಗುಲ ಆಡಳಿತ ಮಂಡಳಿ ತಿಳಿಸಿದೆ.
ಕೊರೊನಾ ಲಸಿಕೆ ಪಡೆದಿರುವ ಪ್ರಮಾಣಪತ್ರ ಹಾಗೂ 48 ಗಂಟೆಗಳ ಹಿಂದೆ ಪರೀಕ್ಷೆ ಮಾಡಿಸಿದ ಕೊರೊನಾ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯೊಂದಿಗೆ ಭಕ್ತರು ದೇಗುಲಕ್ಕೆ ಬರಬಹುದಾಗಿದೆ.
ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಗರಿಷ್ಠ ಐದು ಸಾವಿರ ಭಕ್ತರಿಗೆ ಅವಕಾಶ ನೀಡಲಾಗಿದೆ.
ಕೊರೊನಾ ಸೋಂಕಿನ ಏರಿಕೆ ಹಿನ್ನೆಲೆಯಲ್ಲಿ ಕೇರಳದಲ್ಲಿ ಶಬರಿಮಲೆ ದೇಗುಲ ಸೇರಿದಂತೆ ಹಲವು ಪ್ರಮುಖ ದೇಗುಲಗಳನ್ನು ಮುಚ್ಚಲಾಗಿತ್ತು. ಇದೀಗ ಐದು ದಿನಗಳ ಕಾಲ ದೇವಾಲಯವನ್ನು ತೆರೆಯಲಾಗುತ್ತಿದೆ.


