ತಿರುವನಂತಪುರ: ದೇವಾಲಯದ ಪಾತ್ರೆಗಳನ್ನು ಮಾರಾಟ ಮಾಡುವ ಮೂಲಕ ಕೊರೋನಾ ಬಿಕ್ಕಟ್ಟಿನಿಂದ ಉಂಟಾದ ಆರ್ಥಿಕ ತೊಂದರೆಗಳನ್ನು ನಿವಾರಿಸಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದೆ. ಹೊಸ ನೇಮಕಾತಿಗಳನ್ನು ಮಿತಿಗೊಳಿಸಲು ಸಹ ನಿರ್ಧರಿಸಲಾಯಿತು. ದೇವಾಲಯಗಳಿಗೆ ಆದಾಯ ಕುಸಿಯುತ್ತಿರುವುದರಿಂದ ಇದನ್ನು ನಿವಾರಿಸಲು ದೇವಾಲಯದ ಪಾತ್ರೆಗಳ ಮಾರಾಟಕ್ಕೆ ಮುಂದಾಗಲಾಗಿದೆ.
ದೈನಂದಿನ ಬಳಕೆಯ ಪಾತ್ರೆಗಳನ್ನು ಹೊರತುಪಡಿಸಿ ಎಲ್ಲವನ್ನೂ ಮಾರಾಟ ಮಾಡಲು ತೀರ್ಮಾನಿಸಲಾಗಿದೆ. ಕ್ಷೇತ್ರದ ಉತ್ಸವದ ವೇಳೆ ಮಂಡಳಿಗೆ ಮುಖ್ಯ ಆದಾಯದ ಮೂಲವೆಂದರೆ ಶಬರಿಮಲೆಯ ಕಾಣಿಕೆ/ ಸೇವಾ ಹಣಗಳಾಗಿವೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದಿಂದ ಗಮನಾರ್ಹವಾಗಿ ಆದಾಯ ಕುಸಿದಿದೆ. ಮಾಸ ಪೂಜೆಗಾಗಿ ಬರುವ ಭಕ್ತರ ಸಂಖ್ಯೆಯೂ ತೀವ್ರವಾಗಿ ಕಡಿಮೆಯಾಗಿದೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಎನ್ ವಾಸು ಹೇಳಿದರು.
ದೇವಾಲಯದ ಚಿನ್ನದ ಎಣಿಕೆ ಅಂತಿಮ ಹಂತದಲ್ಲಿದೆ. 500 ಕೆಜಿಯಷ್ಟು ಚಿನ್ನ ಇರಬಹುದೆಂದು ಮಂಡಳಿ ಅಂದಾಜಿಸಿದೆ. ದೇವಾಲಯಗಳಲ್ಲಿ ಆದಾಯ ಸೋರಿಕೆಯನ್ನು ತಡೆಯಲು ತಪಾಸಣೆಗಳನ್ನು ಬಿಗಿಗೊಳಿಸಲು ಮಂಡಳಿಯು ನಿರ್ಧರಿಸಿದೆ.


