ತಿರುವನಂತಪುರ: ದೇವಸ್ವಂ ಮಂಡಳಿಯ ದೇವಾಲಯಗಳ ಹೆಚ್ಚುವರಿ ಭೂಮಿಯನ್ನು ಪ್ರಾಯೋಗಿಕವಾಗಿ ಬಳಸಬೇಕು ಎಂದು ಕೇರಳ ದೇವಸ್ವಂ ಖಾತೆ ಸಚಿವ ಕೆ.ರಾಧಾಕೃಷ್ಣನ್ ಹೇಳಿದ್ದಾರೆ. ಆದಾಯವನ್ನು ಹೆಚ್ಚಿಸಲು ಸಮರ್ಥ ಚಟುವಟಿಕೆಗಳಿಗಾಗಿ ದೇವಾಲಯದ ಬಳಕೆಯಾಗದ ಭೂಮಿಯನ್ನು ಉತ್ತಮ ಚಟುವಟಿಕೆಗಳಿಗೆ ಬಿಡುವಂತೆ ಅವರು ದೇವಸ್ವಂ ಮಂಡಳಿ ಅಧ್ಯಕ್ಷರಿಗೆ ನಿರ್ದೇಶನ ನೀಡಿದರು.
ಕೊರೋನದ ಸಂದರ್ಭದಲ್ಲಿ ವಿಧಿಸಲಾದ ನಿರ್ಬಂಧಗಳ ಭಾಗವಾಗಿ ದೇವಾಲಯಗಳನ್ನು ಮುಚ್ಚಲಾಗಿದೆ. ಇದು ಆದಾಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ. ಈ ಸಂದರ್ಭದಲ್ಲಿ, ದೇವಾಲಯಗಳು ತಮ್ಮದೇ ಆದ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು. ಆದಾಯ ಹೆಚ್ಚಿಸುವ ಗುರಿಯನ್ನು ಹೊಂದಿರುವ ಯೋಜನೆಗಳನ್ನು ಜಾರಿಗೆ ತರುವುದು ಅಗತ್ಯವಾಗಿದೆ ಎಂದರು.
ದೇವಸ್ವಂ ಮಂಡಳಿಗಳ ಭೂಮಿಯನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ದೇವಾಲಯದ ಅರ್ಪಣೆ, ಪ್ರಸಾದದಂತಹ ಸೇವೆಗಳು ಆನ್‍ಲೈನ್‍ನಲ್ಲಿ ಲಭ್ಯವಾಗಲಿದೆ ಎಂದೂ ಸಚಿವರು ಹೇಳಿದರು. ಈ ನಿರ್ಧಾರದ ಹಿನ್ನೆಲೆಯಲ್ಲಿ ಯೋಜನೆಯನ್ನು ಸಿದ್ಧಪಡಿಸುವಂತೆ ಸಚಿವರು ತಿರುವಾಂಕೂರು ದೇವಸ್ವಂ, ಕೊಚ್ಚಿನ್ ದೇವಸ್ವಂ, ಗುರುವಾಯೂರ್ ದೇವಸ್ವಂ, ಕೂಡಲ್ಮಾಣಿಕ್ಯಂ ದೇವಸ್ವಂ ಮತ್ತು ಮಲಬಾರ್ ದೇವಸ್ವಂ ಮಂಡಳಿಗಳಿಗೆ ನಿರ್ದೇಶನ ನೀಡಿದ್ದಾರೆ.





