ಮಂಜೇಶ್ವರ: ಸುಧೀರ್ಘ ಕಾಲ ಕಾಸರಗೋಡುಜಿಲ್ಲಾಧಿಕಾರಯಾಗಿಸೇವೆ ಸಲ್ಲಿಸಿ ವರ್ಗಾವಣೆಗೊಂಡು ತೆರಳುತ್ತಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಕೇರಳ ತುಳು ಅಕಾಡೆಮಿ ವತಿಯಿಂದ ಅಕಾಡೆಮಿ ಮಂಜೇಶ್ವರ ಅಂಗಡಿಪದವಿನಲ್ಲಿರುವ ಕಾರ್ಯಾಲಯದಲ್ಲಿ ಶನಿವಾರ ಸಂಜೆ ಬೀಳ್ಕೊಡುಗೆ ನೀಡಲಾಯಿತು.
ಕೇರಳ ತುಳು ಅಕಾಡೆಮಿ ಅ|ಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸಿ ಅಭಿನಂದಿಸಿ ಮಾತನಾಡಿ, ಜಿಲ್ಲಾಧಿಕಾರಿಗಳ ವಿಶೇಷ ಕಾಳಜಿ, ಬೆಂಬಲದಿಂದ ತುಳು ಅಕಾಡೆಮಿಯ ಸುಸಜ್ಜಿತ ತುಳು ಭವನ ಅತ್ಯಂತ ವೇಗದಲ್ಲಿ ಅನುಷ್ಠಾನಗೊಂಡು ನಾಡಿಗೆ ಸಮರ್ಪಣೆಯಾಗಿದೆ. ತುಳು ಭಾಷೆ ಮತ್ತು ನಾಡಿಗೆ ಬೀಧಗಳನ್ನು ಎಣಿಸದೆ ಅವರು ನೀಡಿದ ಪರಿಗಣನೆಯನ್ನು ಅಕಾಡೆಮಿ ಮತ್ತು ತುಳುವರು ಸದಾ ಸ್ಮರಿಸುವರು ಎಂದು ತಿಳಿಸಿದರು.
ತುಳು ಅಕಾಡೆಮಿ ಸದಸ್ಯ ರಾಮಕೃಷ್ಣ ಕಡಂಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ರವೀಂದ್ರ ರೈ ಮಲ್ಲಾವರ, ಸಚಿತಾ ರೈ ಪೆರ್ಲ, ರಾಜೀವಿ ಕಳಿಯೂರು, ರಾಜು ಸ್ಟೀಪನ್ ಡಿಸೋಜ, ಭಾರತೀ ಬಾಬು, ಜಿಲ್ಲಾ ಹಣಕಾಸು ಅಧಿಕಾರಿ ಕೆ.ಸತೀಶನ್, ಕಂದಾಯ ಇಲಾಖೆಯ ಸಿಬ್ಬಂದಿ ಸುರೇಶ ಮಣಿಯಾಣಿ ಕೂಡ್ಲು ಉಪಸ್ಥಿತರಿದ್ದು ಮಾತನಾಡಿದರು. ಅಭಿನಂದನೆಗೆ ಜಿಲ್ಲಾಧಿಕಾರಿಗಳು ಕೃತಜ್ಞತಾ ನುಡಿಗಳನ್ನಾಡಿ ತುಳು ಅಕಾಡೆಮಿಯ ಭವಿಷ್ಯದ ಕಾರ್ಯಚಟುವಟಿಕೆಗಳು ಸಮರ್ಥವಾಗಿ ಮುನ್ನಡೆಯಲಿ ಎಂದು ಹಾರೈಸಿದರು. ತುಳು ಅಕಾಡೆಮಿಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಸ್ವಾಗತಿಸಿ, ಸದಸ್ಯೆ ಗೀತಾ ಸಾಮಾನಿ ವಂದಿಸಿದರು.




