ಆಲಪ್ಪುಳ: ಬ್ರಿಟಿಷರು ಭಾರತೀಯರನ್ನು ಪ್ರಕೃತಿ ಆರಾಧನೆಯಿಂದ ವಿಮುಖಗೊಳಿಸಿದರು ಎಂದು ಖ್ಯಾತ ಪರಿಸರವಾದಿ ಡಾ.ಮಾಧವ್ ಗಾಡ್ಗಿಲ್ ಹೇಳಿದ್ದಾರೆ. ಅರಣ್ಯವನ್ನು ಶೋಷಿಸಲು ಅರಣ್ಯ ಕಾನೂನುಗಳನ್ನು ಪರಿಚಯಿಸಲಾಯಿತು ಮತ್ತು ಸಾಮಾನ್ಯ ಜನರನ್ನು ಅರಣ್ಯದ ವಿರುದ್ಧವಿರುವಂತೆ ಬೆಳೆಸಲಾಯಿತು. ಬ್ರಿಟಿಷರು ಅರಣ್ಯವನ್ನು ರಕ್ಷಿಸುವ ಬದಲು ಭಕ್ಷಿಸಿದರು ಮತ್ತು ನಮಗೆ ಕಲಿಸಿದರು ಎಂದವರು ತಿಳಿಸಿದರು.
ಭಾನುವಾರ ಆಲಪ್ಪುಳದಲ್ಲಿ ನಡೆದ ಬಾಲಗೋಕುಲಗಳ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಡುಗಳು ಮತ್ತು ಪ್ರಕೃತಿಯ ಬಗ್ಗೆ ಭಾರತದ ನಂಬಿಕೆ ಧರ್ಮ ಆಧಾರಿತವಾಗಿದೆ. ಉಪನಿಷತ್ತುಗಳು ಪ್ರಕೃತಿಯ ವೈಭವವನ್ನು ಕುರಿತು ಮಾತನಾಡುತ್ತವೆ. ಶ್ರೀಕೃಷ್ಣನು ಪ್ರಕೃತಿಯನ್ನು ಆರಾಧಿಸಲು ನಮಗೆ ಕರೆನೀಡಿದ್ದನು. ಆದರೆ ಪಾಶ್ಚಾತ್ಯ ನಿಲುವು ಪ್ರಕೃತಿಯ ವಿರುದ್ಧ ಹೋರಾಡಿ ಪ್ರಗತಿ ಸಾಧಿಸುವುದಾಗಿದೆ. ಮನುಷ್ಯ ಮಾತ್ರ ಶ್ರೇಷ್ಠ ಮತ್ತು ಪ್ರಕೃತಿ ಮನುಷ್ಯನಿಗಿಂತ ಕೀಳೆಂದು ಬೈಬಲ್ ಹೇಳಿದೆ. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದು ಭಾರತದ ದೃಷ್ಟಿ. ನಮ್ಮ ಪೂರ್ವಜರು ಆಲದ ಮರವನ್ನು ಅದ್ಭುತ ಮರವೆಂದು ಭಾವಿಸಿದ್ದರು. ಆಧುನಿಕ ವಿಜ್ಞಾನವು ಅಲದ ಮರದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.
ಇಕೋ ಟೂರಿಸಂ ನಂತಹ ಪರಿಸರ ಪ್ರವಾಸೋದ್ಯಮ ಹೆಸರಿನಲ್ಲಿ ಪ್ರಕೃತಿಯನ್ನು ಈಗ ಇನ್ನೊಂದು ರೀತಿಯಲ್ಲಿ ಶೋಷಿಸಲಾಗುತ್ತಿದೆ. ಅದೇ ರೀತಿ ಆನೆಗಳು ಮತ್ತು ಹುಲಿಗಳನ್ನು ಮಾತ್ರ ರಕ್ಷಿಸಲಾಗುತ್ತಿದ್ದು, ಸೂಕ್ಷ್ಮಜೀವಿಗಳನ್ನು ಸಹ ರಕ್ಷಿಸಬೇಕು. ಅರಣ್ಯ ಮತ್ತು ಪ್ರಕೃತಿಯನ್ನು ರಕ್ಷಿಸುವ ಅಗತ್ಯವನ್ನು ಜನರು ಅನುಭವಿಸಬೇಕು. ಜನರು ಸ್ವತಃ ಕಾಡಿನ ರಕ್ಷಕರಾಗಿರಬೇಕು. ಸರ್ಕಾರ ಅಥವಾ ಅರಣ್ಯ ಇಲಾಖೆ ಇಲ್ಲದಿದ್ದರೂ ಪ್ರಕೃತಿಯನ್ನು ರಕ್ಷಿಸಲಾಗುವುದು ಎಂಬ ಪ್ರತಿಜ್ಞೆಯನ್ನು ಮಕ್ಕಳು ತೆಗೆದುಕೊಳ್ಳಬೇಕು ಎಂದು ಗಾಡ್ಗಿಲ್ ಹೇಳಿದರು.





