HEALTH TIPS

ವಿಶ್ವಕುಟುಂಬದ ಭಿತ್ತಿಯಲ್ಲಿ ನಮ್ಮೊಳಗಿನ ಗಾಂಧಿಯನ್ನು ಹುಡುಕುವ ಪ್ರಯತ್ನ - ಡಾ.ಎಂ ಎಸ್ ಆಶಾದೇವಿ

        ಕಾಸರಗೋಡು:  ಗಾಂಧಿಯನ್ನು ಸಿದ್ಧಾಂತಗಳ ಮೂಲಕ ಪರಿಚಯಿಸುವ ವಿಧಾನವು ಸರಿಯಲ್ಲ. ಇದು ಏಕಮುಖ ನೆಲೆಯ ಪರಿಚಯವಾಗುತ್ತದೆ. ಗಾಂಧಿಯನ್ನು ಪ್ರವೇಶಿಸಲು ಅನೇಕ ದಾರಿಗಳಿವೆ; ಅನೇಕ ಕಥನಗಳಿವೆ. ಕಥನಗಳ ಮುಖೇನ ಗಾಂಧಿಯನ್ನು ಕಾಣುವ ಪ್ರಯತ್ನ ಮಾಡಬೇಕು. ಗಾಂಧಿ ಬಂದ ಕಾದಂಬರಿಯ ಗಾಂಧಿ ಅಗೋಚರ ನೆಲೆಯಲ್ಲಿ ಇಡೀ ಭಾರತವನ್ನು ಪ್ರಭಾವಿಸಿದ ಕಥನವನ್ನು ಮುಂದಿಡುತ್ತದೆ. ಒಟ್ಟಿನಲ್ಲಿ ಗಾಂಧಿ ಬೌದ್ಧಿಕ ಅಲಂಕಾರದ ಚರ್ಚೆ ಮಾತ್ರವಲ್ಲ, ನಮ್ಮೆಲ್ಲರ ಜೊತೆಗೆ ನಡೆಯುವ ವ್ಯಕ್ತಿಯಾಗಿ ಕಾಣಿಸುತ್ತಾರೆ. ವಿವೇಕ ಮತ್ತು ಅಂತಃಕರಣ ಇಂದು ಅಪರೂಪವಾಗುತ್ತಿದೆ. ಗಾಂಧಿಯ ಅಂತಃಕರಣ ಬಹಳ ಮುಖ್ಯ. ಗಾಂಧಿ ಬಂದ ಕಾದಂಬರಿಯು ಭಾರತದ ಅತ್ಯಂತ ವಿಶಿಷ್ಟವಾದ ನಿರೂಪಣೆಗಳಲ್ಲಿ ಒಂದಾಗಿದೆ ಎಂದು ಬೆಂಗಳೂರು ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎಂ. ಎಸ್. ಆಶಾದೇವಿ ಅಭಿಪ್ರಾಯಪಟ್ಟರು.

               ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪೆರಿಯ,ಕಾಸರಗೋಡಿನ ಕನ್ನಡ ವಿಭಾಗವು ಆಯೋಜಿಸಿದ ಸರಣಿ ಉಪನ್ಯಾಸ 'ಸಾಹಿತ್ಯಯಾನ'ದ ಒಂಭತ್ತನೆಯ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.

         'ಮಣ್ಣಿನ ವಾಸನೆಯ ಗಾಂಧಿ' ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ಅವರು 'ಗಾಂಧಿ ಬಂದ' ಕಾದಂಬರಿಯು ಅನೇಕ ಮಗ್ಗಲುಗಳ  ಓದನ್ನು ಒಳಗೊಂಡಿದೆ. ಗಾಂಧಿಯನ್ನು ಭಿನ್ನ ನೆಲೆಯಲ್ಲಿ ಕಾಣುವ ಪ್ರಯತ್ನವನ್ನು ನಾಗವೇಣಿಯವರು ಮಾಡಿದ್ದಾರೆ. ಗಾಂಧಿ ಮನುಷ್ಯ ಲೋಕದ ಕನಸು ಮತ್ತು ಗುರಿಯಾಗಿ ಪ್ರತಿಬಿಂಬಿತವಾಗಿದೆ. ಗಾಂಧಿ ಬಂದ ಕಾದಂಬರಿಯು ಹೆಣ್ಣು ಮಕ್ಕಳ ಬರಹದ ಬಗೆಗಿನ ಅಪನಂಬಿಕೆಯನ್ನು ದಿಕ್ಕರಿಸುವ ಪ್ರಯತ್ನವನ್ನು ಮಾಡುತ್ತದೆ. ವಿಶ್ವಕುಟುಂಬದ ಭಿತ್ತಿಯಲ್ಲಿ ನಮ್ಮೊಳಗಿನ ಗಾಂಧಿಯನ್ನು ಹುಡುಕುವ ಪ್ರಯತ್ನವನ್ನು ಈ ಕಾದಂಬರಿಯು ಮಾಡುತ್ತದೆ. ಗಾಂಧಿ ಎನ್ನುವುದು ಬದುಕಿನ ಕ್ರಮ, ಕಾದಂಬರಿಯಲ್ಲಿಯೂ ಅದರ ಹುಡುಕಾಟವಿದೆ ಎಂದರು.

          ಕೇಂದ್ರೀಯ ವಿ.ವಿ.ಯ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ.ಮೋಹನ್ ಎ.ಕೆ., ಉಪಸ್ಥಿತರಿದ್ದರು.ಪ್ರಥಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಸ್ವಾತಿ ಜಿ., ಸ್ವಾಗತಿಸಿ, ರೋಶನಿ ವಂದಿಸಿದರು. ನವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries