ಕಾಸರಗೋಡು: ಕೇರಳದ ಪೊಲೀಸರು ಭಾರತೀಯ ದಂಡಸಂಹಿತೆ ಬದಲು ಪಿಣರಾಯಿ ಕೋಡ್ ಹಿಂಬಾಲಿಸುತ್ತಿರುವುದಾಗಿ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಶ್ರೀಕಾಂತ್ ಆರೋಪಿಸಿದ್ದಾರೆ.
ಅವರು ಬಿಜೆಪಿ ರಾಜ್ಯಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್ ಅವರನ್ನು ಸುಳ್ಳು ಕೇಸುಗಳಲ್ಲಿ ಸಿಲುಕಿಸುವ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರದ ಕ್ರಮ ಖಂಡಿಸಿ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆ ಉದ್ಘಾಟಿಸಿ ಮಾತನಾಡಿದರು.
ಸಿಪಿಎಂ ಮುಖಂಡರ ಆಣತಿಯಂತೆ ಕೋಡಕ್ಕರ ಹಾಗೂ ಮಂಜೇಶ್ವರದಲ್ಲಿ ಬಿಜೆಪಿ ವಿರುದ್ಧದ ಪ್ರಕರಣಗಳು ಮುಂದೆ ಸಾಗುತ್ತಿದೆ. ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರದ ಬಿಎಸ್‍ಪಿ ಅಭ್ಯರ್ಥಿಯಾಗಿದ್ದ ಸುಂದರ ಅವರ ವಿರುದ್ಧ ಯಾವುದೇ ಕೇಸು ದಾಖಲಾಗಿಲ್ಲ. ಬಿಜೆಪಿಗೆ ಬೆಂಬಲ ನೀಡಿ ಸುಂದರ ಅವರು ಬಿಎಸ್‍ಪಿ ಅಭ್ಯರ್ಥಿತನದಿಂದ ಹಿಂದೆ ಸರಿದಿದ್ದು, ಒಂದು ತಿಂಗಳ ನಂತರ ಕೇಸು ನೀಡಿರುವುದು ನಿಗೂಢತೆಗೆ ಕಾರಣವಾಗಿದೆ. ರಾಜಕೀಯ ವಿರೋಧಿಗಳನ್ನು ಸುಳ್ಳು ಕೇಸಿನ ಮೂಲಕ ಮಣಿಸಲು ಯತ್ನಿಸುತ್ತಿರುವ ಸರ್ಕಾರದ ಧೋರಣೆ ಫಲನೀಡದು ಎಂದು ತಿಳಿಸಿದರು. ಮುಖಂಡರಾದ ವಕೀಲ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಎ. ವಏಲಾಯುಧನ್, ಸುಧಾಮ ಗೋಸಾಡ, ನವೀನ್‍ರಾಜ್ ಮುಂತಾದವರು ಪಾಲ್ಗೊಂಡಿದ್ದರು.




