ಮುಳ್ಳೇರಿಯ: ಬೆಳ್ಳೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಸ್ವಯಂಚಾಲಿತ ಹಾಲು ಸಂಗ್ರಹ ಘಟಕದ ಉದ್ಘಾಟನೆ ಬುಧವಾರ ನಡೆಯಿತು.
ಸಂಸದ ರಾಜಮೋಹನ ಉಣ್ಣಿತ್ತಾನ್ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಆಧುನಿಕ ಕಾಲಘಟ್ಟಕ್ಕೆ ಸರಿಯಾದ ತಂತ್ರಜ್ಞಾನ ಬಳಸಿ ಹಾಲು ಸಂಗ್ರಹಣೆಯನ್ನು ಮಾಡಲು ಆರಂಭಿಸಿದ ಬೆಳ್ಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯವನ್ನು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತಿ ಸದಸ್ಯೆ ಶೈಲಜಾ ಭಟ್ ವಹಿಸಿದ್ದರು. ಅವರು ಈ ಸಂದರ್ಭ ಮಾತನಾಡಿ , ಜಿಲ್ಲಾ ಪಂಚಾಯತಿನಿಂದ ಸಾಧ್ಯವಾದ ಎಲ್ಲಾ ಸಹಕಾರವನ್ನು ಈ ಸಂಸ್ಥೆಗೆ ನೀಡುವ ಭರವಸೆಯನ್ನು ನೀಡಿದರು.
ಕಾರಡ್ಕ ಬ್ಲಾಕ್ ಡೈರಿ ಫೀಲ್ಡ್ ಇನ್ಸ್ಪೆಕ್ಟರ್ ಬಿನುಮೋನ್ ಅವರು, ಸರ್ಕಾರವು ಡೈರಿಗೆ ಕೊಡುವ ಸವಲತ್ತುಗಳನ್ನು ವಿವರಿಸಿದರು. ಬ್ಲಾಕ್ ಪಂಚಾಯತಿ ಪ್ರತಿನಿಧಿ ರವಿಪ್ರಸಾದ್ ಹಾಗೂ ಗ್ರಾಮ ಪಂಚಾಯತಿ ಜನಪ್ರತಿನಿಧಿ ಗೀತಾ ಬಿ.ಯನ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ರಾಜಗೋಪಾಲ ಕೈಪಂಗಳ ಸ್ವಾಗತಿಸಿ, ಕಾರ್ಯದರ್ಶಿ ಸುಜಯ ಕುಮಾರಿ ವಂದಿಸಿದರು.






