HEALTH TIPS

ಡೆಲ್ಟಾ ರೂಪಾಂತರ ತಳಿ ಪ್ರಭಾವ ಕಡಿಮೆಯಾಗಿಲ್ಲ: ಐಎನ್‌ಎಸ್‌ಎಸಿಒಜಿ ಎಚ್ಚರಿಕೆ

          ನವದೆಹಲಿ: ಡೆಲ್ಟಾ ರೂಪಾಂತರ ತಳಿ ಪ್ರಭಾವ ಕಡಿಮೆಯಾಗಿಲ್ಲ. ದೇಶದಲ್ಲಿ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳಲ್ಲಿ ಈ ತಳಿ ಇರುವುದು ಕಂಡು ಬಂದಿದೆ ಎಂದು 'ಇಂಡಿಯನ್ ಸಾರ್ಸ್‍ಕೋವ್-2 ಜೆನೊಮಿಕ್ಸ್‌ ಕಾನ್ಸೋರ್ಟಿಯಮ್' (ಐಎನ್‍ಎಸ್‍ಎಸಿಒಜಿ) ತಿಳಿಸಿದೆ.

          ಇತರ ರೂಪಾಂತರ ತಳಿಗಳ ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ, ಡೆಲ್ಟಾ ತಳಿಯ ಪ್ರಾಬಲ್ಯ ಇನ್ನೂ ಮುಂದುವರಿದಿದೆ. ದಕ್ಷಿಣ ಏಷ್ಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪತ್ತೆಯಾಗಿರುವ ಹೊಸ ಪ್ರಕರಣಗಳಲ್ಲಿ ಈ ರೂಪಾಂತರ ತಳಿ ಪತ್ತೆಯಾಗಿದ್ದು, ವೇಗವಾಗಿ ಹಬ್ಬುತ್ತಿದೆ ಎಂದು ಎಚ್ಚರಿಕೆ ನೀಡಿದೆ.

          ಅತಿ ಹೆಚ್ಚು ಲಸಿಕೆ ಪಡೆದ ಜನರು ಇರುವ ಪ್ರದೇಶಗಳಲ್ಲಿ ಮತ್ತು ವ್ಯವಸ್ಥಿತವಾದ ಉತ್ತಮ ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಹೊಂದಿರುವ ದೇಶಗಳಲ್ಲಿ ಈ ತಳಿಯ ನಿಯಂತ್ರಣವಾಗುತ್ತಿದೆ ಎಂದು ವಿವರಿಸಿದೆ.

         ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಐಸಿಎಂಆರ್‌) ನಡೆಸಿದ ಅಧ್ಯಯನದ ಅನ್ವಯ ಲಸಿಕೆ ಪಡೆದವರ ಮೇಲೆ ಡೆಲ್ಟಾ ತಳಿಯು ಕಡಿಮೆ ಪರಿಣಾಮ ಬೀರಿದ್ದು, ಶೇಕಡ 9.8ರಷ್ಟು ಪ್ರಕರಣಗಳಲ್ಲಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮರಣ ಪ್ರಮಾಣವು ಶೇಕಡ 0.4ರಷ್ಟು ಮಾತ್ರ ಇದೆ ಎಂದು ಐಎನ್‌ಎಸ್‌ಎಸಿಒಜಿ ತಿಳಿಸಿದೆ.

         ದೇಶದಲ್ಲಿ ಲಂಬ್ಡಾ ತಳಿಯ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಪ್ರವಾಸಿಗರಲ್ಲಿ ಮತ್ತು ಅವರ ಸಂಪರ್ಕಕ್ಕೆ ಒಳಗಾದವರಲ್ಲಿ ಲಂಬ್ಡಾ ತಳಿ ಪತ್ತೆಯಾಗಿದೆ ಎಂದು ಬ್ರಿಟನ್‌ನಿಂದ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದೆ.

                       ರೋಗ ನಿರೋಧಕ ಶಕ್ತಿ ಕುಂದಿಸುವ ಡೆಲ್ಟಾ

         ಲಂಡನ್‌: ಡೆಲ್ಟಾ ರೂಪಾಂತರ ತಳಿಯ ವಿರುದ್ಧ ಲಸಿಕೆಯು ರಕ್ಷಣೆ ಒದಗಿಸುತ್ತದೆ. ಆದರೆ, ಈ ತಳಿಯು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

           ಫ್ರಾನ್ಸ್‌ನ ಪಾಸ್ಟೌರ್‌ ಸಂಸ್ಥೆ ಈ ಬಗ್ಗೆ ಅಧ್ಯಯನ ನಡೆಸಿದೆ. ಕೋವಿಡ್‌ನಿಂದ ಗುಣಮುಖರಾದ 56 ಮಂದಿಯ ರಕ್ತ ಸಂಗ್ರಹಿಸಿ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ರೂಪಾಂತರ ತಳಿಗಳ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿದೆ. ಆದರೆ, ಬ್ರಿಟನ್‌ ಸೇರಿದಂತೆ ಜಗತ್ತಿನಾದ್ಯಂತ ಲಸಿಕೆ ಹಾಕಿಸಿಕೊಂಡವರ ಸಂಖ್ಯೆ ಕಡಿಮೆ. ಹೀಗಾಗಿ, ಸಾಮೂಹಿಕವಾಗಿ ಪ್ರತಿರೋಧಕ ಶಕ್ತಿ ಸಾಧ್ಯವಾಗಿಲ್ಲ ಎಂದು ಅಧ್ಯಯನ ವರದಿ ತಿಳಿಸಿದೆ.

               ಆತಂಕ ಬೇಡ: 'ಡೆಲ್ಟಾ ರೂಪಾಂತರ ತಳಿಯ ಬಗ್ಗೆ ಆತಂಕ ಪಡಬೇಕಾಗಿಲ್ಲ. ಪತ್ತೆಯಾಗುತ್ತಿರುವ ಶೇಕಡ 98ರಷ್ಟು ಹೊಸ ಪ್ರಕರಣಗಳಲ್ಲಿ ಈ ತಳಿ ಪತ್ತೆಯಾಗುತ್ತಿರುವುದರಿಂದ ಇದೊಂದು ಸಾಮಾನ್ಯ ತಳಿ ಎಂದೇ ಪರಿಗಣಿಸಬೇಕು' ಎಂದು ಬ್ರಿಟನ್‌ನ ಮುಖ್ಯ ವೈದ್ಯಾಧಿಕಾರಿ ಕ್ರಿಸ್‌ ವಿಟ್ಟಿ ಪ್ರತಿಪಾದಿಸಿದ್ದಾರೆ.

                        ಶೇಕಡ 75ರಷ್ಟು ಮಾದರಿಗಳಲ್ಲಿ ಹೊಸ ತಳಿ

          ವಿಶ್ವಸಂಸ್ಥೆ/ಜಿನಿವಾ: ಭಾರತ, ಚೀನಾ, ರಷ್ಯಾ, ಇಸ್ರೇಲ್‌ ಮತ್ತು ಬ್ರಿಟನ್‌ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕಳೆದ ನಾಲ್ಕು ವಾರಗಳಲ್ಲಿ ಸಂಗ್ರಹಿಸಿರುವ ಮಾದರಿಗಳಲ್ಲಿ ಶೇಕಡ 75ರಷ್ಟು ಡೆಲ್ಟಾ ತಳಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ತಿಳಿಸಿದೆ.

ಲಸಿಕಾ ಅಭಿಯಾನ ವ್ಯಾಪಕವಾಗಿ ನಡೆಯುತ್ತಿದ್ದರೂ ಹಲವು ರಾಷ್ಟ್ರಗಳಲ್ಲಿ ಕೋವಿಡ್‌-19 ಪ್ರಕರಣಗಳು ಹೆಚ್ಚುತ್ತಿವೆ. ಇಂಡೊನೇಷ್ಯಾ, ಬ್ರಿಟನ್‌, ಬ್ರೆಜಿಲ್‌, ಭಾರತ ಮತ್ತು ಅಮೆರಿಕದಲ್ಲಿ ಕಳೆದ ವಾರ ಅತಿ ಹೆಚ್ಚು ಕೋವಿಡ್‌-19 ಪ್ರಕರಣಗಳು ಪತ್ತೆಯಾಗಿವೆ ಎಂದು ಅದು ತಿಳಿಸಿದೆ.

ಮುಂದಿನ ದಿನಗಳಲ್ಲಿಯೂ ಡೆಲ್ಟಾ ತಳಿ ತನ್ನ ಪ್ರಾಬಲ್ಯ ಮುಂದುವರಿಸಲಿದೆ. 180 ದೇಶಗಳಲ್ಲಿ ಅಲ್ಫಾ ತಳಿ ಇರುವುದು ವರದಿಯಾಗಿದೆ. 130 ದೇಶಗಳಲ್ಲಿ ಬೀಟಾ ಮತ್ತು 78 ದೇಶಗಳಲ್ಲಿ ಗಾಮಾ ಹಾಗೂ 124 ದೇಶಗಳಲ್ಲಿ ಡೆಲ್ಟಾ ತಳಿ ಇರುವುದು ಪತ್ತೆಯಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries