HEALTH TIPS

ಕೇರಳದಲ್ಲಿ ದೇಶದ ಮೊದಲ ಡಿಜಿಟಲ್‌ ವಿಶ್ವವಿದ್ಯಾಲಯ: ಭರ್ಜರಿ ಆರಂಭ

            ತಿರುವನಂತಪುರ: ದೇಶದ ಮೊದಲ ಡಿಜಿಟಲ್‌ ವಿಶ್ವವಿದ್ಯಾಲಯವಾದ 'ಕೇರಳ ಡಿಜಿಟಲ್‌ ವಿಜ್ಞಾನಗಳ ವಿಶ್ವವಿದ್ಯಾಲಯ'ದಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಕೋವಿಡ್‌ ಪಿಡುಗಿನ ನಡುವೆಯೂ ವಿದ್ಯಾರ್ಥಿಗಳಿಂದ ಭಾರಿ ಪ್ರತಿಕ್ರಿಯೆ ದೊರೆತಿದೆ.

          ಇಲ್ಲಿನ ಪಿಎಚ್‌.ಡಿ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಲಭ್ಯವಿರುವ 30 ಸೀಟುಗಳಿಗೆ 442 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವಿ.ವಿ ಮೂಲಗಳು ತಿಳಿಸಿವೆ. ಇದು ಕೇರಳ ಡಿಜಿಟಲ್‌ ವಿಶ್ವವಿದ್ಯಾಲಯದ (ಡಿಯುಕೆ) ಮೊದಲ ಶೈಕ್ಷಣಿಕ ಕಾರ್ಯಕ್ರಮ.

        ಡಿಯುಕೆಯು 'ಎಐ ರೊಬೊಟಿಕ್ಸ್‌', 'ಕಂಪ್ಯುಟೇಷನಲ್‌ ಇಂಟೆಲಿಜೆನ್ಸ್‌', 'ಕಂಪ್ಯೂಟೇಷನಲ್‌ ಇಮೇಜಿಂಗ್‌ ಸಿಸ್ಟಂ' ಸೇರಿದಂತೆ ಅತ್ಯಾಧುನಿಕ ವಿಷಯಗಳ ಕುರಿತು ಡಾಕ್ಟರಲ್‌ ಕಾರ್ಯಕ್ರಮಗಳನ್ನು ಪರಿಚಯಿಸಿರುವುದರಿಂದ ಗಮನ ಸೆಳೆದಿದೆ.

        ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತ ಕೋರ್ಸ್‌ಗಳನ್ನು ನಡೆಸುತ್ತಿದ್ದ ಕೇರಳದ ಭಾರತೀಯ ಮಾಹಿತಿ ತಂತ್ರಜ್ಞಾನ ಮತ್ತು ನಿರ್ವಹಣಾ ಸಂಸ್ಥೆಯನ್ನು (ಐಐಐಟಿಎಂ-ಕೆ) ಮೇಲ್ದರ್ಜೆಗೇರಿಸಿ ಜನವರಿಯಲ್ಲಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.

           ಅರ್ಜಿ ಸಲ್ಲಿಸಿರುವ ಹೆಚ್ಚಿನ ಅಭ್ಯರ್ಥಿಗಳು ರೆಗ್ಯುಲರ್‌ ಪಿಎಚ್‌.ಡಿ ಪ್ರವೇಶಕ್ಕೆ ಆಸಕ್ತಿ ಹೊಂದಿದ್ದಾರೆ. ಹೊಸದಾಗಿ ಪರಿಚಯಿಸಲಾಗಿರುವ 'ಇಂಡಸ್ಟ್ರಿ ರೆಗ್ಯುಲರ್ ಪಿಎಚ್‌.ಡಿ'ಗೂ ಬೇಡಿಕೆ ವ್ಯಕ್ತವಾಗಿದೆ.


       ಒಟ್ಟಾರೆ ಸಲ್ಲಿಕೆಯಾಗಿರುವ 442 ಅರ್ಜಿಗಳ ಪೈಕಿ 259 ಅಭ್ಯರ್ಥಿಗಳು ರೆಗ್ಯುಲರ್‌ ಪಿಎಚ್‌.ಡಿ, 169 ಅಭ್ಯರ್ಥಿಗಳು ಅರೆ-ಕಾಲಿಕ ಪಿಎಚ್‌.ಡಿ ಅಧ್ಯಯನಕ್ಕೆ ಒಲವು ತೋರಿದ್ದಾರೆ. ಅಭ್ಯರ್ಥಿಗಳಿಗೆ ಮುಂದಿನ ವಾರ ಸಂದರ್ಶನಗಳು ನಡೆಯಲಿದ್ದು, ಆಗಸ್ಟ್‌ ವೇಳೆಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

       ಸಂಶೋಧನಾ ಚಟುವಟಿಕೆಗಳ ಜತೆಗೆ ಹೊಸ ರೂಪದಲ್ಲಿ ಎಂ.ಎಸ್ಸಿ ಮತ್ತು ಎಂ.ಟೆಕ್‌ ಕೋರ್ಸ್‌ಗಳನ್ನು ಡಿಯುಕೆ ಆಗಸ್ಟ್‌ನಲ್ಲಿ ಪರಿಚಯಿಸಲಿದೆ ಎಂದು ವಿಶ್ವವಿದ್ಯಾಲಯದ ಉನ್ನತ ಮೂಲಗಳು ತಿಳಿಸಿವೆ.

         ಸಾಂಪ್ರದಾಯಿಕ ಎಂ.ಟೆಕ್‌ ಕೋರ್ಸ್‌ಗಳಿಗಿಂತ ಭಿನ್ನವಾದ ಕೋರ್ಸ್‌ಗಳನ್ನು ಆರಂಭಿಸಲು ಡಿಯುಕೆ ಮುಂದಾಗಿದೆ. ಪ್ರಮುಖವಾಗಿ ಕೃತಕ ಬುದ್ಧಿಮತ್ತೆ (ಎಐ), ಎಐ ಹಾರ್ಡ್‌ವೇರ್, ಸೈಬರ್ ಸೆಕ್ಯುರಿಟಿ ಎಂಜಿನಿಯರಿಂಗ್, ಸೈಬರ್-ಫಿಸಿಕಲ್ ಸಿಸ್ಟಮ್ಸ್ ಮತ್ತು ಸಿಗ್ನಲ್ ಪ್ರೊಸೆಸ್, ಕನೆಕ್ಟೆಡ್ ಸಿಸ್ಟಮ್ಸ್ ಮತ್ತು ಇಂಟೆಲಿಜೆನ್ಸ್‌ನಂತಹ ಸಮಕಾಲೀನ ವಿಷಯಗಳ ಕುರಿತ ವಿಶೇಷ ಕೋರ್ಸ್‌ಗಳಿಗೆ ಚಾಲನೆ ನೀಡಲಿದೆ.

          ಹಾಗೆಯೇ ಮೆಷಿನ್ ಇಂಟೆಲಿಜೆನ್ಸ್, ಕಾಗ್ನಿಟಿವ್ ಸೈನ್ಸಸ್, ಸೈಬರ್ ಸೆಕ್ಯುರಿಟಿ, ಎಕಾಲಜಿಕಲ್ ಇನ್ಫರ್ಮ್ಯಾಟಿಕ್ಸ್‌ , ಕಂಪ್ಯೂಟೇಷನಲ್ ಎಕನಾಮಿಕ್ಸ್ ಮತ್ತು ಕಂಪ್ಯೂಟೇಷನಲ್ ಸೋಶಿಯಲ್ ಸೈನ್ಸ್ (ಎಐ, ದತ್ತಾಂಶ ಮತ್ತು ಸಮಾಜವನ್ನು ಕೇಂದ್ರೀಕರಿಸಿ) ವಿಷಯಗಳಲ್ಲಿ ಎಂ.ಎಸ್ಸಿ ಕೋರ್ಸ್‌ಗಳನ್ನು ಆರಂಭಿಸಲಿದೆ.

        'ವಿಶ್ವವಿದ್ಯಾಲಯದ ಪಿಎಚ್‌.ಡಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಡಿಜಿಟಲ್ ತಂತ್ರಜ್ಞಾನಗಳು ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಗುಣಮಟ್ಟದ ಸಂಶೋಧನೆಗೆ ಬೇಡಿಕೆ ಇದೆ ಎಂಬುದನ್ನು ತೋರಿಸುತ್ತದೆ' ಎಂದು ಕೇರಳದ ಡಿಜಿಟಲ್ ವಿಶ್ವವಿದ್ಯಾಲಯದ ಕುಲಪತಿ ಡಾ. ಸಾಜಿ ಗೋಪಿನಾಥ್ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries