ಕುಂಬಳೆ: ಒನ್ಲೈನ್ ತರಗತಿಯಲ್ಲಿ ಕಲಿಯಲು ವಿದ್ಯಾರ್ಥಿಗಳಿಗೆ ಒಂದು ಮೊಬೈಲ್ ನೀಡಲು ಸಾಧ್ಯವಾಗದ ಸರ್ಕಾರ ಕೇರಳವನ್ನು ಆಡಳಿತ ಮಾಡುತ್ತಿದೆ. ಪರಿಶಿಷ್ಟ ಜಾತಿ, ಪಂಗಡ ವಿಭಾಗದ 9 ಕೋಟಿ ರೂ. ನಿಧಿಯನ್ನು ನಷ್ಟ ಮಾಡಿ ಈ ವಿಭಾಗದ ಜನರನ್ನು ಸರ್ಕಾರ ವಂಚಿಸಿದೆ ಎಂದು ಬಿಜೆಪಿ ನೇತಾರ ಎ.ಕೆ.ಕಯ್ಯಾರು ಆರೋಪಿಸಿದರು.
ಪ.ಜಾತಿ, ಪಂಗಡ ವಿಭಾಗದ ವಾರ್ಷಿಕ ಯೋಜನೆಯ ನಿಧಿಯನ್ನು ಬಳಸದಿರುವ ರಾಜ್ಯ ಸರ್ಕಾರ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಆಡಳಿತ ನ್ಯೂನತೆಗಳಿಗೆ ಎದುರಾಗಿ ಶುಕ್ರವಾರ ಯುವಮೋರ್ಚಾ ನೇತೃತ್ವದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಮುಂದೆ ನಡೆದ ಧರಣಿ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ, ಪ್ರ.ಕಾರ್ಯದರ್ಶಿ ಆದರ್ಶ್ ಬಿಎಂ, ಕಾರ್ಯದರ್ಶಿ ಸಂತೋಷ್ ದೈಗೊಳಿ, ಜನಪ್ರತಿನಿಧಿಗಳಾದ ಅನಿಲ್ ಮಣಿಯಂಪಾರೆ, sಯುವಮೋರ್ಚಾ ಉಪಾಧ್ಯಕ್ಷ ಶಶಿ ಕುಮಾರ್ ಪುತ್ತಿಗೆ ಮೊದಲಾದವರು ನೇತೃತ್ವ ನೀಡಿದರು.





