ನವದೆಹಲಿ: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಆರಂಭವಾಗಿದೆ. ಗಾಡಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಓಲಾ ಸಂಸ್ಥೆ ನೀಡಿಲ್ಲವಾದರೂ 499 ರೂಪಾಯಿಗೆ ಮುಂಗಡ ಬುಕ್ಕಿಂಗ್ ಆರಂಭಿಸಲಾಗಿದ್ದು, ಇದೀಗ ಹೊಸದೊಂದು ದಾಖಲೆಯನ್ನೇ ಬರೆದಿದೆ.
ಓಲಾ ಸಂಸ್ಥೆಯು ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬುಕ್ಕಿಂಗ್ ಅನ್ನು ಜುಲೈ 15ರಂದು ಆರಂಭಿಸಿತ್ತು. ಬುಕ್ಕಿಂಗ್ ಆರಂಭವಾದ ಕೇವಲ 24 ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಸ್ಕೂಟರ್ ಬುಕ್ ಆಗಿದೆಯಂತೆ. ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಇತಿಹಾಸದಲ್ಲಿ ಇದೇ ಗರಿಷ್ಠ ಎಂದು ಹೇಳಲಾಗಿದೆ. ಅದರಲ್ಲೂ ನಿರ್ದಿಷ್ಟ ಮಾಹಿತಿಯನ್ನು ಕೊಡದಿದ್ದರೂ ಜನರು ಸ್ಕೂಟರ್ಗಾಗಿ ಬುಕ್ಕಿಂಗ್ ಮಾಡಿದ್ದು, ಸಂಸ್ಥೆಯ ಸಂತೋಷಕ್ಕೆ ಕಾರಣವಾಗಿದೆ.
ಈ ಬಗ್ಗೆ ಓಲಾ ಸಂಸ್ಥೆಯ ಅಧ್ಯಕ್ಷ ಮತ್ತು ಸಮೂಹ ಸಿಇಒ ಭಾವೀಶ್ ಅಗರ್‌ವಾಲ್ ಮಾತನಾಡಿದ್ದು, 'ನಮ್ಮ ಮೊದಲ ಎಲೆಕ್ಟ್ರಿಕ್ ವಾಹನಕ್ಕಾಗಿ ಭಾರತದಾದ್ಯಂತ ಗ್ರಾಹಕರ ಅದ್ಭುತ ಪ್ರತಿಕ್ರಿಯೆಯಿಂದ ನಾನು ರೋಮಾಂಚನಗೊಂಡಿದ್ದೇನೆ. ಇದು ಗ್ರಾಹಕರ ಆದ್ಯತೆಗಳನ್ನು ಇವಿಗಳಿಗೆ ವರ್ಗಾಯಿಸುವ ಸ್ಪಷ್ಟ ಸೂಚಕವಾಗಿದೆ. ಇದು ನಮ್ಮ ಒಂದು ದೊಡ್ಡ ಹೆಜ್ಜೆಯಾಗಿದೆ. ಓಲಾ ಸ್ಕೂಟರ್ ಅನ್ನು ಕಾಯ್ದಿರಿಸಿದ ಮತ್ತು ಇವಿ ಕ್ರಾಂತಿಯಲ್ಲಿ ಸೇರಿಕೊಂಡ ಎಲ್ಲ ಗ್ರಾಹಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದು ಪ್ರಾರಂಭ ಮಾತ್ರ!' ಎಂದು ಹೇಳಿದ್ದಾರೆ.
ಈಗ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬುಕ್ಕಿಂಗ್ ಮಾಡಿರುವ ಗ್ರಾಹಕರು, ಸ್ಕೂಟರ್‌ಗಳ ವಿತರಣೆ ಪ್ರಾರಂಭವಾದಾಗ ಆದ್ಯತೆ ಪಡೆಯುತ್ತಾರೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ 100-150 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು, ಬದಲಾಯಿಸಬಹುದಾದ ಲಿಥಿಯಂ-ಐಯಾನ್ ಬ್ಯಾಟರಿ, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಕ್ಲೌಡ್ ಕನೆಕ್ಟಿವಿಟಿ, ಅಲಾಯ್ ವೀಲ್ಸ್, ಟೆಲಿಸ್ಕೋಪಿಕ್ ಸಸ್ಪೆನ್ಷನ್ ಅಪ್ ಫ್ರಂಟ್ ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ. ಇನ್ನೊಂದು ತಿಂಗಳಲ್ಲಿ ಸ್ಕೂಟರ್ ವಿತರಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.


