ಲಂಡನ್: ಕೊರೊನಾದ ಅಲೆ ಸ್ವಲ್ಪ ಮಟ್ಟಿಗೆ ತಣ್ಣಗಾಯಿತು ಎನ್ನುವಷ್ಟರಲ್ಲಿ ಮತ್ತೆ ಕೆಲ ರಾಷ್ಟ್ರಗಳಲ್ಲಿ ಸೋಂಕಿನ ಆರ್ಭಟ ಹೆಚ್ಚಾಗಿದೆ. ಅದೇ ರೀತಿ ಬ್ರಿಟನ್ನಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಏರಲಾರಂಭಿಸಿದೆ. ಕರೊನಾ ಲಸಿಕೆ ಪಡೆದಿದ್ದ ಆರೋಗ್ಯ ಸಚಿವರಿಗೂ ಸೋಂಕು ದೃಢವಾಗಿದೆ.
ಬ್ರಿಟನ್ನ ಆರೋಗ್ಯ ಸಚಿವರಾಗಿರುವ ಸಾಜಿದ್ ಜಾವಿದ್ ಅವರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಬಗ್ಗೆ ಟ್ವಿಟ್ಟರ್ನಲ್ಲಿ ಮಾಹಿತಿ ನೀಡಿರುವ ಅವರು, ನನಗೆ ರ್ಯಾಪಿಡ್ ಪರೀಕ್ಷೆಯಲ್ಲಿ ಕರೊನಾ ಕಾಣಿಸಿಕೊಂಡಿದೆ. ಆರ್ಟಿಪಿಸಿಆರ್ ವರದಿಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಕೊರೊನಾದ ಲಸಿಕೆಯನ್ನು ಈಗಾಗಲೇ ಪಡೆದಿದ್ದರಿಂದಾಗಿ ರೋಗ ಲಕ್ಷಣ ಹೆಚ್ಚಿಲ್ಲ. ನೀವೂ ಲಸಿಕೆ ಹಾಕಿಸಿಕೊಂಡು ಸುರಕ್ಷಿತವಾಗಿರಿ ಎಂದು ಹೇಳಿದ್ದಾರೆ.
ಬ್ರಿಟನ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೊಮ್ಮೆ ಏರಿಕೆ ಕಾಣುತ್ತಿದೆ. ಶುಕ್ರವಾರ ರಾಷ್ಟ್ರದಲ್ಲಿ 36 ಸಾವಿರಕ್ಕೂ ಅಧಿಕ ಪ್ರಕರಣಗಳು ಕಾಣಿಸಿಕೊಂಡಿವೆ. ಕಳೆದ ವಾರಕ್ಕೆ ಹೋಲಿಸಿದರೆ ಸೋಂಕಿನ ಪ್ರಮಾಣ ಶೇ. 17 ಏರಿಕೆ ಆಗಿದೆ ಎಂದು ತಿಳಿಸಲಾಗಿದೆ. ಅದರಲ್ಲೂ ಡೆಲ್ಟಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.


