ಮಂಗಳೂರು: ಕೇರಳದಲ್ಲಿ ಕೊರೊನಾ ಸೋಂಕು ಸ್ಫೋಟವಾಗಿದೆ. ದೇಶದಲ್ಲೇ ಅತೀ ಹೆಚ್ಚು ಕೇಸ್‌ಗಳು ಕೇರಳದಲ್ಲಿ ಪತ್ತೆಯಾಗಿವೆ. ಕೇರಳದಲ್ಲಿ ಕೊರೊನಾ ಸರ್ವವ್ಯಾಪಿಯಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕದಲ್ಲೂ ಆತಂಕ ಮನೆಮಾಡಿದೆ.
ಹೀಗಾಗಿ ದಕ್ಷಿಣ ಕನ್ನಡ ಮತ್ತು ಕೇರಳ ಗಡಿ ಭಾಗದಲ್ಲಿ ಹೆಚ್ಚಿನ ತಪಾಸಣೆ ಮಾಡಲಾಗುತ್ತಿದೆ. ಮುಖ್ಯವಾಗಿ ಮಂಗಳೂರಿನಿಂದ ಕೇರಳವನ್ನು ಸಂಪರ್ಕಿಸುವ ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ತಪಾಸಣೆಯಾಗುತ್ತಿದೆ. ಆದರೆ ಈ ನಡುವೆ ಕೇರಳದಿಂದ ನಕಲಿ ನೆಗೆಟಿವ್ ಸರ್ಟಿಫಿಕೇಟ್ ಮಾಡಿಕೊಂಡು ಬರುವವರ ಸಂಖ್ಯೆಯೂ ಹೆಚ್ಚಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೊರೊನಾ ಹೆಚ್ಚಾಗುವ ಆತಂಕ ಮೂಡಿದೆ.
ಕೇರಳದಿಂದ ನಕಲಿ ಪ್ರಮಾಣ ಪತ್ರವನ್ನು ತಯಾರಿಸಿ ಕರ್ನಾಟಕಕ್ಕೆ ದಾಂಗುಡಿ ಇರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಪ್ರಮುಖವಾಗಿ ಮಂಗಳೂರಿನ ವಿವಿಧ ಕಾಲೇಜುಗಳಲ್ಲಿ ಕೇರಳದ ಅತೀ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ಆಗಮಿಸುತ್ತಿದ್ದಾರೆ.
630 ಮಂದಿ ವಿದ್ಯಾರ್ಥಿಗಳಿಗೆ ಕೊರೊನಾ ಧೃಡ ಕೇರಳದಿಂದ ಮಂಗಳೂರಿಗೆ ಬರುವವರಿಗೆ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯವಾಗಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ತಂದರೂ ಏಳು ದಿನ ಕ್ವಾರಂಟೈನ್ ಅವಧಿಯ ಬಳಿಕ ಮತ್ತೊಮ್ಮೆ ಕೊರೊನಾ ಪರೀಕ್ಷೆ ಮಾಡಿದಾಗ ಕೊರೊನಾ ಪಾಸಿಟಿವ್ ಬರುತ್ತಿದೆ.
ಕೇವಲ 20 ದಿನದಲ್ಲಿ 900 ವಿದ್ಯಾರ್ಥಿಗಳ ಕೊರೊನಾ ಪರೀಕ್ಷೆ ಮಾಡಿದಾಗ ಅದರಲ್ಲಿ 630 ಮಂದಿ ವಿದ್ಯಾರ್ಥಿಗಳಿಗೆ ಕೊರೊನಾ ಧೃಡವಾಗಿತ್ತು. ಈ ಹಿನ್ನಲೆಯಲ್ಲಿ ಸಂಶಯಗೊಂಡ ಪೊಲೀಸರು ಗಡಿಯಲ್ಲಿ ತಪಾಸಣೆಯನ್ನು ತೀವ್ರಗೊಳಿಸಿದ ನಂತರ ನಕಲಿ ನೆಗೆಟಿವ್ ವರದಿಯ ಮೂಲಕ ಕೇರಳಿಗರು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಎಸಿಪಿ ರಂಜಿತ್ ಬಂಡಾರು ನೇತೃತ್ವದಲ್ಲಿ ತಪಾಸಣೆ
ಪೊಲೀಸರು ತಲಪಾಡಿ ಗಡಿಯಲ್ಲಿ ತಪಾಸಣೆಯನ್ನು ಬಿಗಿಗೊಳಿಸಿದ್ದಾರೆ. ಎಸಿಪಿ ರಂಜಿತ್ ಬಂಡಾರು ನೇತೃತ್ವದಲ್ಲಿ ಪೊಲೀಸರು ಮತ್ತು ಜಿಲ್ಲಾಡಳಿತ ತಪಾಸಣೆ ಮಾಡುತ್ತಿದ್ದು, ಈ ವೇಳೆ ನಕಲಿ ಆರ್‌ಟಿ-ಪಿಸಿಆರ್ ವರದಿಯನ್ನು ತಂದಿದ್ದ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಮೂಲದ ಆದಿಲ್, ಇಸ್ಮಾಯಿಲ್, ಹನೀನ್, ತಮೀಮ್, ಮಹಮ್ಮದ್ ಶರೀಫ್, ಅಬೂಬುಕ್ಕರ್ ಎಂಬ ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧನ ಮಾಡಿದ್ದಾರೆ. ಇದರ ಜೊತೆಗೆ ಕಾರಿನಲ್ಲಿ ನಕಲಿ ದಾಖಲೆಗಳನ್ನು ಹೊಂದಿದ್ದ ನಾಲ್ಕು ಮಂದಿ ಮಹಿಳೆಯರನ್ನೂ ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ರಮವಾಗಿ ಮಂಗಳೂರು ಪ್ರವೇಶ
ನಕಲಿ ಪ್ರಮಾಣ ತೋರಿಸಿ ಈ ಏಳು ಜನರು ಅಕ್ರಮವಾಗಿ ಮಂಗಳೂರು ಪ್ರವೇಶಕ್ಕೆ ಯತ್ನಿಸಿದ್ದು, ಪೊಲೀಸ್ ತಪಾಸಣೆ ವೇಳೆ ಈ ನಾಲ್ವರು ಸಿಕ್ಕಿಬಿದ್ದಿದ್ದಾರೆ. ನಾಲ್ವರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಪಿಡೆಮಿಕ್ ಅಯಾಕ್ಟ್, ವಂಚನೆ ಮತ್ತು ಪೋರ್ಜರಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧನ ಮಾಡಲಾಗಿದೆ. ಇವರೆಲ್ಲರೂ ಮಂಗಳೂರಿನ ಸ್ನೇಹಿತನ ಮನೆಗೆ ತೆರಳುವವರಿದ್ದು, ಇದಕ್ಕಾಗಿ ನಕಲಿ ದಾಖಲೆಯನ್ನು ಸೃಷ್ಠಿ ಮಾಡಿದ್ದರು. ಈ ಹಿಂದೆಯೂ ನಕಲಿ ದಾಖಲೆಗಳನ್ನು ತೆಗೆದುಕೊಂಡು ಮಂಗಳೂರು ಪ್ರವೇಶ ಮಾಡಿದ್ದರು. ಆದರೆ ಈ ಬಾರಿ ಅನಾಯಾಸವಾಗಿ ಗಡಿದಾಟಬಹುದೆಂದು ತಿಳಿದುಕೊಂಡವರಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ಕೇರಳ ಗಡಿಭಾಗದಲ್ಲಿರುವ ಮದ್ಯದಂಗಡಿಗಳು
ದಕ್ಷಿಣ ಕನ್ನಡ ಮತ್ತು ಕೇರಳದ ನಡುವೆ 16 ಗಡಿ ಭಾಗವನ್ನು ಹೊಂದಿದ್ದು, ಸದ್ಯ 16 ಗಡಿ ಭಾಗದಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದೆ. ಕೇರಳ ಗಡಿಭಾಗದಲ್ಲಿರುವ ಮದ್ಯದಂಗಡಿಗಳನ್ನು ಬಂದ್ ಮಾಡಲು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ನೀಡಿದ್ದು, ಕೇರಳ ಗಡಿಭಾಗದ ಜನರು ಮದ್ಯದಂಗಡಿಗಳಿಗೆ ಬರುವುದನ್ನು ತಪ್ಪಿಸಲು ಜಿಲ್ಲಾಡಳಿತ ಈ ನಿಯಮ ರೂಪಿಸಿತ್ತು. ಆದರೆ ಇದೀಗ ಕೇರಳಿಗರು ನಕಲಿ ಸರ್ಟಿಫಿಕೇಟ್‌ಗಳನ್ನು ಮಾಡಿಕೊಂಡು ಜಿಲ್ಲೆಯ ಒಳಗೆ ಪ್ರವೇಶ ಮಾಡುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ.




