ತಿರುವನಂತಪುರಂ: ಕೇರಳ ಪೋಲೀಸ್ ಇಲಾಖೆ ನೇತೃತ್ವದ ಡ್ರೋನ್ ಪೋರೆನ್ಸಿಕ್ ಲ್ಯಾಬ್ ಮತ್ತು ಸಂಶೋಧನಾ ಕೇಂದ್ರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಉದ್ಘಾಟಿಸಿದರು. ಆದರೆ ಸಿಎಂ ಉದ್ಘಾಟಿಸಿದ ಬಳಿಕ ಡ್ರೋನ್ ನಿಯಂತ್ರಣ ತಪ್ಪಿ ಹತ್ತಿರದ ಮರದಲ್ಲಿ ಸಿಲುಕಿಕೊಂಡ ಘಟನೆಗೆ ಸಾಕ್ಷಿಯಾಯಿತು.
ಘಟನೆಯ ನಂತರ ಇಂಧನ ಖಾಲಿಯಾದ ಕಾರಣ ಡ್ರೋನ್ ಮರದ ಮೇಲೆ ಸುರಕ್ಷಿತವಾಗಿ ಇಳಿಯಿತು ಎಂದು ಡ್ರೋನ್ ತಯಾರಕರು ವಿವರಿಸಿದರು. ಆದರೆ ಅದರ ಚಿತ್ರಗಳನ್ನು ಬಿಡುಗಡೆ ಮಾಡುವುದರೊಂದಿಗೆ, ಸಾಮಾಜಿಕ ಮಾಧ್ಯಮವು ಭಾರೀ ಚರ್ಚೆಗೆ ಎಳೆತಂದಿದೆ. ಡ್ರೋನ್ ತಯಾರಿಕಾ ಕಂಪನಿ ಮತ್ತು ಮುಖ್ಯಮಂತ್ರಿಯನ್ನು ಅನೇಕ ಜನರು ಟೀಕಿಸಿದ್ದಾರೆ.
ಇಂತಹ ಸಂಶೋಧನಾ ವ್ಯವಸ್ಥೆಯನ್ನು ವಿಧಿವಿಜ್ಞಾನ ಪರೀಕ್ಷೆ ಮತ್ತು ಸಾಧನದ ಮೆಮೊರಿ ಸಾಮಥ್ರ್ಯದ ಮೂಲಕ ವಿವಿಧ ರೀತಿಯ ಡ್ರೋನ್ ಗಳ ನಿರ್ಮಾಣ ಲಕ್ಷಣಗಳನ್ನು ಕಂಡುಹಿಡಿಯಲು ವಿನ್ಯಾಸಗೊಳಿಸಲಾಗಿದೆ.
ಉದ್ಘಾಟನೆಯ ನಂತರ ಮುಖ್ಯಮಂತ್ರಿ, ಭಯೋತ್ಪಾದನೆಯಂತಹ ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ಯಶಸ್ವಿಯಾಗಿ ಎದುರಿಸಲು ಕೇರಳ ಪೋಲೀಸರು ಇಂತಹ ವ್ಯವಸ್ಥೆಯನ್ನು ಸ್ಥಾಪಿಸಿದ್ದಾರೆ ಎಂದು ಹೇಳಿದರು. ಕಾನೂನು ಮತ್ತು ಸುವ್ಯವಸ್ಥೆ ಮತ್ತು ಜನಸಂದಣಿ ನಿಯಂತ್ರಣಕ್ಕಾಗಿ ಕೇರಳ ಪೋಲೀಸರು ತನ್ನದೇ ಆದ ಡ್ರೋನ್‍ಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದ್ದಾರೆ ಎಂದು ಪಿಣರಾಯಿ ವಿಜಯನ್ ಹೇಳಿದರು.





