HEALTH TIPS

'ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತೆ ನಮ್ಮ ಹಿಡಿತದಲ್ಲಿದೆ, ತಾಲಿಬಾನ್‌ ಭಯ ಬೇಡ': ಸೇನೆ

               ಶ್ರೀನಗರ: "ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯು ನಮ್ಮ ಹಿಡಿತದಲ್ಲಿದೆ ಹಾಗೂ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡ ತಾಲಿಬಾನ್‌ ನೆರವಿನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ದಾಳಿ ನಡೆಯಲಿದೆ ಎಂಬ ಬಗ್ಗೆ ಯಾವುದೇ ಆತಂಕ ಬೇಡ," ಎಂದು ಸೇನೆಯು ಸ್ಪಷ್ಟನೆ ನೀಡಿದೆ.

          ಶ್ರೀನಗರದಲ್ಲಿ ನಡೆದ ಕಾರ್ಯಕ್ರಮ ಒಂದರ ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸೈನ್ಯದ 15 ಕಾರ್ಪ್‌ಗಳ ಕಮಾಂಡಿಂಗ್ ಜನರಲ್ ಆಫೀಸರ್, ಲೆಫ್ಟಿನೆಂಟ್ ಜನರಲ್ ಡಿ ಪಿ ಪಾಂಡೆ, "ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಭದ್ರತಾ ವ್ಯವಸ್ಥೆಯು ನಮ್ಮ ಹಿಡಿತದಲ್ಲಿದೆ, ಯಾವುದೇ ಆತಂಕ ಬೇಡ," ಎಂದು ನುಡಿದಿದ್ದಾರೆ.

          "ಇದು ಆಟದ ಮೈದಾನ ಹಾಗೂ ನಾನು ಹೊರಗಿನವರ ಬಗ್ಗೆ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಆದರೆ ನೆನಪಿಟ್ಟು ಕೊಳ್ಳಿ ಇಲ್ಲಿನ ಭದ್ರತಾ ವ್ಯವಸ್ಥೆಯು ನಮ್ಮ ಹಿಡಿತದಲ್ಲಿದೆ ಹಾಗೂ ಈ ವಿಚಾರದಲ್ಲಿ ಯಾವುದೇ ಆತಂಕ ಬೇಡ," ಎಂದು ಹೇಳಿದ್ದಾರೆ. ತಾಲಿಬಾನ್‌ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡ ಬಳಿಕ ಭಾರತದ ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳಿಗೆ ಎದುರಾಗಿರುವ ಸಮಸ್ಯೆಯ ಬಗ್ಗೆ ಪ್ರಶ್ನೆ ಮಾಡಿದಾಗ ಈ ಪ್ರತಿಕ್ರಿಯೆಯನ್ನು ಲೆಫ್ಟಿನೆಂಟ್ ಜನರಲ್ ಡಿ ಪಿ ಪಾಂಡೆ ನೀಡಿದ್ದಾರೆ.

          ಶೆರ್-ಇ-ಕಾಶ್ಮೀರ ಕ್ರೀಡಾಂಗಣದಲ್ಲಿ ನಡೆದ ಕಾಶ್ಮೀರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಲೆಫ್ಟಿನೆಂಟ್ ಜನರಲ್ ಡಿ ಪಿ ಪಾಂಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನೀರಜ್‌ ಚೋಪ್ರಾರಂತೆ ಚಿನ್ನದ ಪದಕವನ್ನು ಪಡೆಯುವ ವ್ಯಕ್ತಿಯನ್ನು ಕಾಶ್ಮೀರ ತಯಾರಿ ಮಾಡುವ ಭರವಸೆಯನ್ನು ವ್ಯಕ್ತಪಡಿಸಿದ ಡಿ ಪಿ ಪಾಂಡೆ, ಕಾಶ್ಮೀರ ಕಣಿವೆ ಪ್ರದೇಶದ ಯುವಕರು ಕ್ರೀಡೆಗೆ ಅಧಿಕ ಗಮನ ಕೊಡುವಂತೆ ಒತ್ತಾಯ ಮಾಡಿದರು.

          "ಇಂದು, ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತಿದೆ. ಈ ಫೈನಲ್‌ ಪಂದ್ಯಾಟಕ್ಕೆ ಇಂದಿನ ದಿನಕ್ಕಿಂತ ಉತ್ತಮ ದಿನ ಇರಲು ಸಾಧ್ಯವಿಲ್ಲ. ಯುವಜನರು ಕ್ರೀಡೆಯತ್ತ ಗಮನ ಹರಿಸಿ ಎಂದು ನಾನು ಈ ಸಂದರ್ಭದಲ್ಲಿ ಹೇಳಲು ಬಯಸುತ್ತೇನೆ. ಕ್ರಿಕೆಟ್‌ ಮಾತ್ರವಲ್ಲ. ದೇವರು ಮನಸ್ಸು ಮಾಡಿದರೆ, ನೀರಜ್ ಚೋಪ್ರಾರಂತ ಕ್ರೀಡಾಕಾರ ನಮ್ಮ ಕಣಿವೆ ಪ್ರದೇಶದಿಂದ ಹೊರ ಚಿಮ್ಮುತ್ತಾನೆ," ಎಂದು ಭರವಸೆ ವ್ಯಕ್ತಪಡಿಸಿದರು.

           ತಾಲಿಬಾನ್‌ ಅಫ್ಘಾನಿಸ್ತಾನಕ್ಕೆ ದಾಳಿ ಮಾಡಿದ ಸಂದರ್ಭದಲ್ಲಿ ಅಲ್ಲಿನ ಜೈಲಿನಲ್ಲಿದ್ದ ಉಗ್ರರನ್ನು ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ತಾಲಿಬಾನ್ ಭಯೋತ್ಪಾದಕರು ಅಫ್ಘಾನ್‌ ಜೈಲುಗಳಿಂದ 100 ಕ್ಕೂ ಅಧಿಕ ಜೈಶ್‌-ಎ-ಮೊಹಮ್ಮದ್‌ (ಜೆಎಎಮ್‌) ಸಂಘಟನೆಯ ಉಗ್ರರನ್ನು ಕೂಡಾ ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಈ ಎಲ್ಲಾ ಉಗ್ರರು ಜೊತೆಗೂಡಿದ್ದು, ಭಾರತದ ಮೇಲೆ ದಾಳಿ ಮಾಡಲು ಸಂಚು ಹೂಡುತ್ತಿದ್ದಾರೆ ಎಂದು ವರದಿಗಳು ತಿಳಿಸಿದೆ. ಅದರಲ್ಲೂ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರದ ಮೇಲೆ ದಾಳಿ ನಡೆಸಲು ಈ ಜೈಶ್‌-ಎ-ಮೊಹಮ್ಮದ್‌ ಉಗ್ರರು ಮುಂದಾಗಿದ್ದಾರೆ ಎಂಬ ವರದಿಗಳು ಆಗಿದ್ದವು.

          ಜೈಶ್‌-ಎ-ಮೊಹಮ್ಮದ್‌ ಹಾಗೂ ತಾಲಿಬಾನ್‌ ಉಗ್ರ ಸಂಘಟನೆಗಳ ಹಿರಿಯ ನಾಯಕರುಗಳು ಈಗಾಗಲೇ ಜೊತೆ ಸೇರಿ ಸಭೆ ನಡೆಸಿದ್ದಾರೆ. ಭಾರತದ ಮೇಲೆ ಗುರಿಯಾಗಿಸಿಕೊಳ್ಳುವ ತಮ್ಮ ಎಲ್ಲಾ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಜೈಶ್‌-ಎ-ಮೊಹಮ್ಮದ್‌ ಹಾಗೂ ತಾಲಿಬಾನ್‌ ಉಗ್ರ ಸಂಘಟನೆಗಳ ನಾಯಕರುಗಳು ಚರ್ಚೆ ನಡೆಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ನಡೆದ ಬೆಳವಣಿಗೆಗಳು ಪಾಕಿಸ್ತಾನದ ಈ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಗೆ ಇನ್ನಷ್ಟು ಉತ್ತೇಜನ ನೀಡಿದ್ದಂತಿದೆ. ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿರುವುದು ತಾಲಿಬಾನ್‌ ಈ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗೆ ಧೈರ್ಯ ತುಂಬಿದೆ ಎಂದು ವರದಿಗಳು ಆಗಿದ್ದವು.

       ಈ ನಡುವೆ ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಹೇಳಿಕೆ ನೀಡಿದ್ದ ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್‌, "ಕಾಶ್ಮೀರ ವಿಚಾರ ಎರಡು ದೇಶಗಳಿಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ಭಾರತ ಹಾಗೂ ಪಾಕಿಸ್ತಾನ ಕುಳಿತು ಮಾತನಾಡಿಕೊಂಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಿ," ಎಂದು ಹೇಳಿದ್ದಾರೆ. ಹಾಗೆಯೇ "ಪಾಕಿಸ್ತಾನ ನಮಗೆ ಎರಡನೇ ಮನೆ ಇದ್ದಂತೆ. ಆದರೆ ಎರಡು ರಾಷ್ಟ್ರಗಳ ವಿಚಾರದಲ್ಲಿ ನಾವು ತಲೆ ಹಾಕುವುದಿಲ್ಲ," ಎಂದು ಸ್ಪಷ್ಟನೆ ನೀಡಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries