ಕಾಸರಗೋಡು: ವರದಕ್ಷಿಣೆ ವಿರುದ್ಧ ನಿಷೇಧವನ್ನು ಜಾರಿಗೊಳಿಸಿದ್ದರೂ, ಇಂದಿಗೂ ಅಲ್ಲಿ ಇಲ್ಲಿ ಈ ಸಂಬಂಧ ಅಕ್ರಮ ಘಟನೆಗಳು ಪುನರಾವರ್ತನೆಗೊಳ್ಳುತ್ತಿರುವುದು ದೌರ್ಭಾಗ್ಯಕರ. ಇದರ ವಿರುದ್ಧ ಜಾಗೃತಿ ಮನೆಗಳಿಂದಲೇ ಆರಂಭವಾಗಬೇಕು ಎಂದು ರಾಜ್ಯ ಮಹಿಳಾ ಆಯೋಗ ಸದಸ್ಯೆ ಡಾ.ಷಾಹಿದಾ ಕಮಾಲ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಆಯೋಗ ಮತ್ತು ಕುಟುಂಬಶ್ರೀ ಜಿಲ್ಲಾ ಮಿಷನ್ ವತಿಯಿಂದ ಜರುಗಿದ "ವರದಕ್ಷಿಣೆ ವಿರುದ್ಧ ಜಾಗೃತಿ ಹೊಂದಿರುವ ಸಮಾಜ" ಎಂಬ ವಿಷಯದ ಏಕದಿನ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವರದಕ್ಷಿಣೆ ಸಂಬಂಧ ಸಾರ್ವತ್ರಿಕ ವಿರೋಧ ವ್ಯಕ್ತ ಗೊಳ್ಳುತ್ತಿದ್ದರೂ, ಈ ಕುರಿತು ಕಾನೂನು ಬಾಹಿರ ಕೃತ್ಯಗಳು ನಡೆಯುತ್ತಲೇ ಇವೆ ಎಂಬುದು ಈ ಪಿಡುಗು ಸಮಾಜದಲ್ಲಿ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿವೆ. ಪ್ರತಿ ಕುಟುಂಬ ಮಟ್ಟದಿಂದಲೇ ವರದಕ್ಷಿಣೆ ವಿರುದ್ಧ ಜಾಗರೂಕತೆ ಮೂಡಿಬರಬೇಕು. ದೇಶದ ಬಲ, ಪ್ರಗತಿ ಯುವಶಕ್ತಿ ಯ ಮೂಲಕ ನಡೆಯಬೇಕಿದೆ ಎಂಬ ಮೂಲತತ್ವಕ್ಕೆ ಇಂಥಾ ಪಿಡುಗುಗಳಿಂದ ತಡೆಯಾಗುತ್ತಿದೆ. ಯುವಜನತೆ ದುರ್ಬಲಗೊಳ್ಳುತ್ತಿದ್ದಾರೆ. ಮಹಿಳೆಯರಿಗೆ ಮಾನಸಿಕ ಬೆಂಬಲ ನೀಡಬೇಕಿರುವುದು ಸಮಾಜದ ಕರ್ತವ್ಯ. ಸಂಕಷ್ಟದ ಕಾಲಗಳಲ್ಲಿ ದೃತಿಗೆಡದೆ, ಮುಗ್ಗಟ್ಟನ್ನು ಪರಿಹರಿಸುವ ಅವಧಿಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಮಟ್ಟಕ್ಕೆ ಮಹಿಳಾ ಸಮೂಹ ಉನ್ನತಿ ಸಾಧಿಸಬೇಕು ಎಂದವರು ವಿಶ್ಲೇಷಿಸಿದರು.
ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಸಿ.ಪಿ.ಶುಭಾ ಉಪನ್ಯಾಸ ನಡೆಸಿದರು. ಕುಟುಂಬಶ್ರೀ ಎ.ಡಿ.ಎಂ.ಸಿ. ಪ್ರಕಾಶನ್ ಪಾಲಾಯಿ ಸ್ವಾಗತಿಸಿದರು. ಕುಟುಂಬಶ್ರೀ ಜೆಂಡರ್ ಜಿಲ್ಲಾ ಕಾರ್ಯಕ್ರಮ ಪ್ರಬಂಧಕಿ ಆರತಿ ವಂದಿಸಿದರು.

