ಪೆರ್ಲ : ಸ್ಥಳೀಯ ಆಡಳಿತ ಸರ್ಕಾರಗಳಿಗೆ ಅಭಿವೃದ್ಧಿ ಯೋಜನೆಗಳನ್ನು ಆಯೋಜಿಸುವ ಮತ್ತು ಅನುಷ್ಠಾನಗೊಳಿಸುವ ಅಧಿಕಾರವನ್ನು ವರ್ಗಾಯಿಸುವ ಮೂಲಕ ಕೇರಳದಲ್ಲಿ 1996 ರಲ್ಲಿ ಜಾರಿಗೆ ತಂದ ವಿಕೇಂದ್ರೀಕೃತ ಯೋಜನೆಯಾಗಿದೆ ಜನಕೀಯ ಯೋಜನೆ.
ಜನಕೀಯ ಯೋಜನೆಯ 25 ನೇ ವಾರ್ಷಿಕೋತ್ಸವದ ಭಾಗವಾಗಿ ಎಣ್ಮಕಜೆ ಗ್ರಾಮ ಪಂಚಾಯತಿನಲ್ಲಿ ಜನಕೀಯ ಯೋಜನೆಯ ವರ್ಷ ಪೂರ್ತಿ ನಡೆಯುವ ರಜತ ಮಹೋತ್ಸವದ ಪಂಚಾಯತು ಮಟ್ಟದ ಉದ್ಘಾಟನೆ ಮತ್ತು ಪಂಚಾಯತಿನ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸುವ ಕಾರ್ಯಕ್ರಮ ಮಂಗಳವಾರ ಅಪರಾಹ್ನ ಪಂಚಾಯತು ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಂಚಾಯತು ಅಧ್ಯಕ್ಷ ಸೋಮಶೇಖರ ಜೆ. ಎಸ್ ರವರು ಜನಕೀಯ ಯೋಜನೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಗ್ರಾಮ ಪಂಚಾಯತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಎಸ್ ಗಾಂಭೀರ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ ಕುಲಾಲ್, ಕ್ಷೇಮ ಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌದಾಬಿ ಹನೀಫ್, ಪಂಚಾಯತಿನ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷದ ನೇತಾರರು, ವ್ಯಾಪಾರಿ ವ್ಯವಸಾಯ ಏಕೋಪನಾ ಸಮಿತಿಯ ನೇತಾರರು ಉಪಸ್ಥಿತರಿದ್ದು ಮಾತನಾಡಿದರು. ಕಾರ್ಯಕ್ರಮದಲ್ಲಿ ಪಂಚಾಯತಿಯ ವಿವಿಧ ವಿಭಾಗಗಳ ಉದ್ಯೋಗಸ್ಥರು, ಕುಟುಂಬಶ್ರೀ ಕಾರ್ಯಕರ್ತರು ಭಾಗವಹಿಸಿದ್ದರು.
ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರುಗಳಾದ ಪ್ರೇಮಾ ಎಂ, ಶಾರದಾ ವೈ, ಪುಷ್ಪಾ ಅಮೆಕ್ಕಳ, ಸೋಮಶೇಖರ ಜೆ. ಎಸ್, ಮತ್ತು ಶ್ರೀಮತಿ ರೂಪವಾಣಿ ಆರ್ ಭಟ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಮಾಜಿ ಪಂಚಾಯತು ಅಧ್ಯಕ್ಷರುಗಳು ಅವರ ಆಡಳಿತ ಕಾಲದಲ್ಲಿನ ಅನುಭವಗಳನ್ನು ಮತ್ತು ಸಾಧನೆಗಳನ್ನು ಹಂಚಿಕೊಂಡರು. ಪಂಚಾಯತು ಕಾರ್ಯದರ್ಶಿ ಅಚ್ಚುತ ಮಣಿಯಾಣಿ ಕೆ ಸ್ವಾಗತಿಸಿ, ಸಹಕಾರ್ಯದರ್ಶಿ ವಿಪಿನ್ ಎಸ್. ಜಿ ಜನಕೀಯ ಯೋಜನೆಯ ವರದಿ ಮಂಡಿಸಿದರು. ತಾಂತ್ರಿಕ ಸಹಾಯಕ ಸಫ್ವಾನ್ ವಂದಿಸಿದರು. ಮಹಾತ್ಮಾ ಗಾಂಧಿ ಉದ್ಯೋಗ ಖಾತರಿಯ ಅಭಿಯಂತರ ಮೊಹಮ್ಮದ್ ನವಾಜ್ ನಿರೂಪಿಸಿದರು. ಬಳಿಕ ರಾಜ್ಯಮಟ್ಟದ ರಜತ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮವನ್ನು ಆನ್ಲೈನ್ ಮೂಲಕ ವೀಕ್ಷಿಸಲಾಯಿತು. ಎಲ್ಲಾ ಕಾರ್ಯಕ್ರಮಗಳು ಕೋವಿಡ್ ಮಾನದಂಡಗಳನ್ನು ಪಾಲಿಸಿ ನಡೆಯಿತು.




