ಕುಂಬಳೆ: ಜಿಎಸ್‍ಬಿಎಸ್ ಕುಂಬಳೆ ಶಾಲೆಯಲ್ಲಿ ಆನ್‍ಲೈನ್‍ನಲ್ಲಿ ಅಧ್ಯಯನ ಮಾಡಲು ಸೌಲಭ್ಯವಿಲ್ಲದ ವಿದ್ಯಾರ್ಥಿಗಳಿಗೆ ಮೊಬೈಲ್ ಲೈಬ್ರರಿ ವ್ಯವಸ್ಥೆಯನ್ನು ನಿರ್ಮಿಸಲಾಗುತ್ತದೆ. ಮೊದಲ ಹಂತದಲ್ಲಿ, 40 ವಿದ್ಯಾರ್ಥಿಗಳಿಗೆ ಆನ್‍ಲೈನ್ ಕಲಿಕಾ ಸಾಮಗ್ರಿಗಳನ್ನು ಮೊಬೈಲ್ ಲೈಬ್ರರಿಯ ಮೂಲಕ ಒದಗಿಸಲಾಗುವುದು. 1450 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಕುಂಬಳೆ ಸರ್ಕಾರಿ ಯುಪಿ ಶಾಲೆಯನ್ನು ಈ ವ್ಯವಸ್ಥೆಯ ಮೂಲಕ ಸಂಪೂರ್ಣ ಡಿಜಿಟಲ್ ಶಾಲೆಯಾಗಿ ಮಾಡಲು ಶಿಕ್ಷಕರು ಮತ್ತು ಪೋಷಕರು ಪ್ರಯತ್ನಿಸುತ್ತಿದ್ದಾರೆ.
ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್ ಅವರು ಸ್ವಾತಂತ್ರ್ಯ ದಿನದಂದು ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಜನೆಯನ್ನು ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಅನೆಬಾಗಿಲು ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಯತೀಶ್ ಕುಮಾರ್ ರೈ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾವತಿ, ಅಭಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷ ಕೊಗ್ಗು, ಬಿಪಿಸಿ ಶಿವರಾಮಕೃಷ್ಣನ್ ಮತ್ತು ಶಾಲಾ ಮಾತೃಸಂಘದ ಅಧ್ಯಕ್ಷೆ ಮರಿಯಾ ಬೆಂಜಮಿನ್ ಉಪಸ್ಥಿತರಿದ್ದರು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಬಾಬು ಮಾಸ್ತರ್ ಸ್ವಾಗತಿಸಿ, ನೌಕರ ಸಂಘದ ಕಾರ್ಯದರ್ಶಿ ಲೀನಾ ಟೀಚರ್ ವಂದಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮ ನವೀನ ಕಲ್ಪನೆಗಳಿಂದ ಆವಿಷ್ಕಾರಗಳಿಗೆ ಪ್ರಯತ್ನಿಸುವ ವಿದ್ಯಾರ್ಥಿಗಳಿಗೆ ಡಿಪಾರ್ಟ್‍ಮೆಂಟ್ ಆಫ್ ಸಯನ್ಸ್ ಆಂಡ್ ಟೆಕ್ನೋಲಜಿ ಮತ್ತು ಎಲ್.ಐ.ಎಫ್ ಕೊಡಮಾಡುವ ಸ್ಫೂರ್ತಿ ಪ್ರಶಸ್ತಿಯ ವಿಜೇತರಾದ ತ್ರಿಷಾ ಮತ್ತು ಫಾತಿಮಾ ಮಸೂದ ಎಂಬ ವಿದ್ಯಾರ್ಥಿಗಳಿಗೆ ಪಂಚಾಯತ್ ಮಟ್ಟದ ಸ್ವಾತಂತ್ರ್ಯ ದಿನ ಚಿರಸ್ಮರಣೆ ರಸಪ್ರಶ್ನೆ ವಿಜೇತರಾದ ಇರಾ ಫಾತಿಮಾ ಅವರನ್ನು ಈ ಸಂದರ್ಭ ಅಭಿನಂದಿಸಲಾಯಿತು.




