ಕಾಸರಗೋಡು:ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್‍ಗೆ ಸೇರ್ಪಡೆಗೊಳ್ಳಲು ತೆರಳಿ, ಅಫ್ಘಾನಿಸ್ತಾನದಲ್ಲಿ ಬಂಧಿತರಾಗಿರುವ ಕೇರಳೀಯರೂ ಒಳಗೊಂಡ 5ಸಾವಿರದಷ್ಟು ಅಲ್‍ಖೈದಾ, ಐಸಿಸ್ ಸದಸ್ಯರನ್ನು ತಾಲಿಬಾನ್ ಬಿಡುಗಡೆಗೊಳಿಸಿದೆ. ಈ ಮಧ್ಯೆ ಐಸಿಸ್ ಸೇರ್ಪಡೆಗೊಂಡಿದ್ದ ಕೇರಳದ ನಿಮಿಷಾ ಅಲಿಯಾಸ್ ಫಾತಿಮಾಳ ತಾಯಿ ಬಿಂದು, ತನ್ನ ಪುತ್ರಿಯನ್ನು ತಾಯ್ನಾಡಿಗೆ ಕರೆತರುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದೇ ರೀತಿ ಭಯೋತ್ಪಾದಕರಾಗಲು ಐಸಿಸ್ ಶಿಬಿರ ಸೇರ್ಪಡೆಗೊಂಡಿರುವ ಕೇರಳದ ಇತರ ಮಹಿಳೆಯರೂ ಬಂಧಮುಕ್ತರಾಗಿದ್ದು, ತಾಯ್ನಾಡಿಗೆ ಬರಲು ಮುಂದಾಗಿದ್ದಾರೆ. ಆದರೆ, ಭಾರತ ಸರ್ಕಾರ ಇವರನ್ನು ಕರೆತರಲು ಮುಂದಾಗದ ಹಿನ್ನೆಲೆಯಲ್ಲಿ ಕಾನೂನು ಹೋರಾಟಕ್ಕೂ ಬಿಂದು ಮುಂದಾಗಿದ್ದಾರೆ.
ಕಾಸರಗೋಡಿನ ಖಾಸಗಿ ದಂತ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಮಿಷಾ, 2013ರಲ್ಲಿ ಇಸ್ಲಾಂಗೆ ಮತಾಂತರಗೊಂಡು, ನಂತರ ಪಾಲಕ್ಕಾಡ್ ಯಾಕರ ನಿವಾಸಿ ಬೆಕ್ಸನ್ ಅಲಿಯಾಸ್ ಇಸ್ಸಾ ಎಂಬಾತನನ್ನು ವಿವಾಹಿತಳಾಗಿದ್ದಳು. ಇಸ್ಸಾ ಹಾಗೂ ನಿಮಿಷಾ ವಿವಾಹಿತರಾಗಿ 2016ರಲ್ಲಿ ಶ್ರೀಲಂಕಾ ತೆರಳುವುದಾಗಿ ತಿಳಿಸಿ, ಅಲ್ಲಿಂದ ನೇರ ಅಫ್ಘಾನಿಸ್ಥಾನದ ಐಸಿಸ್ ಭಯೋತ್ಪಾದನಾ ಶಿಬಿರ ಸೇರ್ಪಡೆಗೊಂಡಿದ್ದರು. 2016ರಲ್ಲಿ ಕಾಸರಗೋಡು ಜಿಲ್ಲೆಯ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ 17ಮಂದಿ ಸೇರಿದಂತೆ ಕೇರಳದ 25ಕ್ಕೂ ಹೆಚ್ಚುಮಂದಿ ಐಸಿಸ್ ಶಿಬಿರ ಸೇರ್ಪಡೆಗೊಂಡಿದ್ದರು. ಈ ರೀತಿ ಐಸಿಸ್ ಶಿಬಿರ ಸೇರಿಕೊಂಡವ ಮಹಿಳೆಯರಲ್ಲಿ ಬಹುತೇಕ ಮಂದಿ ಇತರ ಧರ್ಮದಿಂದ ಇಸ್ಲಾಂ ಮತ ಸ್ವೀಕರಿಸಿದವರಾಗಿದ್ದಾರೆ. ಇವರನ್ನು ಪ್ರೀತಿಯ ಜಾಲಕ್ಕೆ ಸಿಲುಕಿಸಿ, ನಂತರ ಮತಾಂತರಗೊಳಿಸಿ ಐಸಿಸ್ ಶಿಬಿರಕ್ಕೆ ರವಾನಿಸಲಾಗುತ್ತಿತ್ತು. ಕೇರಳದಿಂದ ತೆರಳಿ ಐಸಿಸ್ ಶಿಬಿರ ಸೇರ್ಪಡೆಗೊಂಡ ಬಹುತೇಕ ಮಂದಿ ಐಸಿಸ್ ಭಯೋತ್ಪಾದಕರು ವಿರೋಧಿಪಡೆಗಳ ದಾಳಿಯಿಂದ ಸಾವಿಗೀಡಾಗಿದ್ದು, ಇವರ ವಿಧವೆಯರನ್ನು ಅಫ್ಘಾನಿಸ್ತಾನದ ಜೈಲಿನಲ್ಲಿರಿಸಲಾಗಿತ್ತು. ಪ್ರಸಕ್ತ ಅಫ್ಘಾನಿಸ್ತಾನ ತಾಲಿಬಾನ್ ವಶವಾಗುತ್ತಿದ್ದಂತೆ ಜೈಲಿನಲ್ಲಿದ್ದ ಐಸಿಸ್, ಅಲ್-ಖೈದಾ ಭೀಕರ ಭಯೋತ್ಪಾದಕರನ್ನು ತಾಲಿಬಾನಿಗಳು ಬಿಡುಗಡೆಗೊಳಿಸಿದ್ದು, ಇವರಲ್ಲಿ ಕೇರಳದ ಸೋನಿಯ ಸೆಬಾಸ್ಟಿಯನ್ ಅಲಿಯಾಸ್ ಆಯಿಷಾ, ರಾಫಿಲಾ, ಮೆರಿನ್ ಜೇಕಬ್ ಯಾನೆ ಮರಿಯಂ, ಫಾತಿಮಾ ಯಾನೆ ನಿಮಿಷಾ ಎಂಬವರೂ ಒಳಗೊಂಡಿದ್ದಾರೆ.




