ಕಾಸರಗೋಡು:'ನಮಗೂ ಓಣಂ ಉಣ್ಣಲು ಅವಕಾಶ ಮಾಡಿಕೊಡಿ, ನಾಡ ಹಬ್ಬದ ವೇಳೆ ನಮ್ಮನ್ನು ಹಸಿವಿನಿಂದ ಬಳಲುವಂತೆ ಮಾಡಬೇಡಿ'. ಇದು ಎಂಡೋಸಲ್ಫಾನ್ ಸಂತ್ರಸ್ತರು ರಾಜ್ಯವ್ಯಾಪಕವಾಗಿ 'ನಮಗೂ ಓಣಂ ಉಣ್ಣಬೇಕು'ಎಂಬ ಘೋಷಣೆಯೊಂದಿಗೆ ಮಂಗಳವಾರ ಕಾಸರಗೋಡು ಜಿಲ್ಲಾದ್ಯಂತ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಕೇಳಿಬಂದ ಮಾತಿದು.
ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಧರಣಿಯಲ್ಲಿ ಖ್ಯಾತ ಮಾನವಹಕ್ಕು ಹೋರಾಟಗಾರ ವಕೀಲ ಟಿ.ವಿ ರಾಜೇಂದ್ರನ್ ಧರಣಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆ ಪರಿಹರಿಸುವುದಾಗಿ ನೀಡಿದ್ದ ಭರವಸೆಗಳನ್ನು ಸರ್ಕಾರ ಈಡೇರಿಸುವಲ್ಲಿ ವಿಫಲವಾಗಿದೆ. ಕಳೆದ ಐದು ತಿಂಗಳಿಂದ ಎಂಡೋಸಲ್ಫಾನ್ ಸಂತ್ರಸ್ತರಿಗೆ ಲಭಿಸಬೇಕಾದ ಪಿಂಚಣಿಯೂ ಕೈಸೇರದೆ, ನೂರಾರು ತಾಯಂದಿರು ಸಂಕಷ್ಟ ಎದುರಿಸುತ್ತಿದ್ದಾರೆ. ಎಲ್ಲರಂತೆ ಓಣಂ ಉಣ್ಣುವ ಅವಕಾಶದಿಂದ ಈ ತಾಯಂದಿರು ಹಾಗೂ ಮಕ್ಕಳು ವಂಚಿತರಾಗಿದ್ದಾರೆ. ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರ ಚಿಕಿತ್ಸೆಗಾಗಿ ಉತ್ತಮ ಆಸ್ಪತ್ರೆಗಳಿಲ್ಲ. ವಿಶೇಷ ಶಿಬಿರ ನಡೆಸುವ ಭರವಸೆಯೂ ಈಡೇರಿಲ್ಲ. ಉಕ್ಕಿನಡ್ಕದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶಿಲಾನ್ಯಾಸ ನಡೆಸಿ ಎಂಟು ವರ್ಷ ಕಳೆದರೂ ಆಸ್ಪತ್ರೆ ಕಟ್ಟಡ ತಲೆಯೆತ್ತಿಲ್ಲ. ಎಂಡೋಸಲ್ಫಾನ್ ಸಂತ್ರಸ್ತರನ್ನು ಮೂರನೇ ದರ್ಜೆ ನಾಗರಿಕರಂತೆ ಕಾಣುವ ಸರ್ಕಾರದ ವರ್ತನೆ ಬದಲಾಗಬೇಕು ಎಂದು ತಿಳಿಸಿದರು.
ವಿಶಿಷ್ಟ ಪ್ರತಿಭಟನೆ:
ಜಿಲ್ಲೆಯ ವಿವಿಧೆಡೆ ನಡೆದ ಪ್ರತಿಭಟನೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರು ಹಾಗೂ ತಾಯಂದಿರು ಬಾಳೆ ಎಲೆಯಲ್ಲಿ ಮಣ್ಣು ಹಾಕಿ ಪ್ರತೀಕಾರದ ಊಟ ಮಾಡುವ ಮೂಲಕ ಸರ್ಕಾರದ ಗಮನಸೆಳೆಯಲು ಯತ್ನಿಸಿದರು. ಎಣ್ಮಕಜೆ ಪಂಚಾಯಿತಿಯಲ್ಲಿ ನಡೆದ ಧರಣಿಯನ್ನು ಪಂಚಾಯಿತಿ ಅಧ್ಯಕ್ಷ ಜೆ.ಎಸ್. ಸೋಮಶೇಖರ್ ಉದ್ಘಾಟಿಸಿದರು. ವಿವಿಧೆಡೆ ನಡೆದ ಧರಣಿಯಲ್ಲಿ ಎಂಡೋಸಂತ್ರಸ್ತ ಮಕ್ಕಳು ಹಾಗೂ ಇವರ ತಾಯಂದಿರು ಪಾಲ್ಗೊಂಡಿದ್ದರು.





