ಕಾಸರಗೋಡು: ನಗರದಲ್ಲಿ ಅನಧಿಕೃತವಾಗಿ ಫುಟ್‍ಪಾತ್ ಸೇರಿದಂತೆ ವಿವಿಧೆಡೆ ವ್ಯಾಪಾರ ನಡೆಸುತ್ತಿರುವವರ ವಿರುದ್ಧ ನಗರಸಭೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ. ನಗರಸಭೆಯಿಂದ ಪರವಾನಗಿ ಪಡೆಯದೆ, ನಗದಾದ್ಯಂತ ಬೇಕಾಬಿಟ್ಟಿ ವ್ಯಾಪಾರ ನಡೆಸುವವರ ವಿರುದ್ಧ ಈ ಕಾರ್ಯಾಚರಣೆ ಮುಂದುವರಿಯಲಿದೆ.
ಇದೇ ಸಂದರ್ಭ ವ್ಯಾಪಾರಿಗಳು ಎರಡು ಡೋಸ್ ವ್ಯಾಕ್ಸಿನೇಶನ್ ಪಡೆದಿರುವ ಬಗ್ಗೆಯೂ ತಪಾಸಣೆ ನಡೆದುಬರುತ್ತಿದೆ. ಪ್ರಸಕ್ತ ಕಾಸರಗೋಡು ನಗರದಲ್ಲಿ 151ಮಂದಿಗೆ ಅಧಿಕೃತವಾಗಿ ವ್ಯಾಪಾರ ನಡೆಸಲು ಪರವಾನಗಿ ನೀಡಲಾಗಿದೆ. ಇನ್ನು ಕೆಲವರು ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಬಹುತೇಕ ಮಂದಿ ಪರವಾನಗಿ ಪಡೆಯದೆ ರಸ್ತೆ ಅಂಚಿಗೆ ವ್ಯಾಪಾರ ನಡೆಸುತ್ತಿದ್ದು, ಇದರಿಂದ ನಗರದೊಳಗೆ ಟ್ರಾಫಿಕ್ ಜಾಮ್‍ಗೆ ಕಾರಣವಾಗುತ್ತಿರುವ ಬಗ್ಗೆ ದೂರು ವ್ಯಾಪಕಗೊಂಡ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮುಂದುವರಿಸಲಾಗಿದೆ. ಮೊದಲ ದಿನದಲ್ಲಿ ಇಂತಹ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಲಾಗಿದ್ದು, ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಗರಸಭಾ ಕಿರಿಯ ಆರೋಗ್ಯಾಧಿಕಾರಿ ಪಿ.ಟಿ ರೂಪೇಶ್, ಇ.ರಾಜೇಶ್, ಕಾಸರಗೋಡು ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಅಜಿತ್‍ಕುಮಾರ್, ಎಸ್.ಐ ವಿಷ್ಣುಪ್ರಸಾದ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.




