ಕಾಸರಗೋಡು: ಜನಕೀಯ ಯೋಜನೆಯ ಬೆಳ್ಳಿಹಬ್ಬದ ವರ್ಷಪೂರ್ತಿ ಆಚರಣೆಗೆ ಆ, 17ರಂದು ಜಿಲ್ಲೆಯಲ್ಲಿ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
1996ರಿಂದ ಜನಕೀಯ ಯೋಜನೆಗಳಿಗೆ ನೇತೃತ್ವ ನೀಡಿರುವ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು, ಯೋಜನಾ ತಜ್ಞರು, ಉದ್ಯೋಗಿಗಳನ್ನು ಗೌರವಿಸುವ ಕಾರ್ಯಕ್ರಮವೂ ನಡೆಯುವುದು. ಈ ನಿಟ್ಟಿನಲ್ಲಿ ಮಾದರಿ ವನ ನಿರ್ಮಾಣಯೋಜನೆಗೆ ಆ. 17ರಂದು ಚಾಲನೆ ನೀಡಲಾಗುವುದು. ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳ: ಮೂಲಕವೂ ಅರಣ್ಯ ಬೆಳೆಸುವ ಯೋಜನೆ ಹಮ್ಮಿಕೊಳ್ಳಲಾಗುವುದು. ಜಿಪಂ ಕಚೇರಿ ವಠಾರದಲ್ಲಿ ನಿರ್ಮಾಣಗೊಳ್ಳಲಿರುವ ರಜತ ಜ್ಯುಬಿಲಿ ಕಟ್ಟಡದ ಶಿಲಾನ್ಯಾಸವನ್ನು ಸ್ಥಳೀಯಾಡಳಿತ ಖಾತೆ ಸಚಿವ ಎಂ.ವಿ ಗೋವಿಂದನ್ ಮಾಸ್ಟರ್ ನಿರ್ವಹಿಸುವರು. ಜಿಲ್ಲಾ ಮಟ್ಟದ ಸಂವಾದ ಕಾರ್ಯಕ್ರಮ, ಜನಕೀಯ ಯೋಜನಾ ಪ್ರವರ್ತನಾ ಸಂಗಮ, ದಾಖಲೆಗಳ ಪ್ರಕಟಣೆ, ಮಹಿಳಾ ಸಂಗಮ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಶಾನವಾಜ್ ಪಾದೂರ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ಶಿನೋಜ್ ಚಾಕೋ, ವಕೀಲೆ ಎಸ್.ಎನ್. ಸರಿತಾ, ಗೀತಾಕೃಷ್ಣನ್, ಗೋಲ್ಡನ್ ಅಬ್ದುಲ್ ರಹಮಾನ್ ಉಪಸ್ಥಿತರಿದ್ದರು.




