ಬದಿಯಡ್ಕ: ಗೋಳಿಯಡ್ಕ ಪರಿಸರ ನಿವಾಸಿಗಳು ಕಳೆದ ಕೆಲವು ವಾರಗಳಿಂದ ವ್ಯಾಪಕ ಪ್ರಮಾಣದ ಮುಸುವ ಕಾಟದಿಂದ ಹೈರಾಣರಾಗಿದ್ದಾರೆ. ಇಲ್ಲಿಯ ನಿವಾಸಿ ಬಾಲಕೃಷ್ಣ ಎಂಬವರ ಪುತ್ರಿ ಕವಿತಾ (23) ಎಂಬವರಿಗೆ ಇತ್ತೀಚೆಗೆ ಮುಸುವವೊಂದು ಧಾಳಿ ನಡೆಸಿದ್ದು, ಕಡಿತಕ್ಕೊಳಗಾಗಿ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದಿದ್ದರು. ಕವಿತಾಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮುಸುವ ಕಡಿತಕ್ಕೆ ಔಷಧಿ ಇಲ್ಲದ ಕಾರಣ ಪರಿಯಾರಂ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು.
ಮುಸುವದ ಕಾಟದಿಂದ ದ್ವಿಚಕ್ರ ವಾಹನಗಳು ಹಾನಿಗೊಳಗಾಗುತ್ತಿರುವುದಾಗಿ ದೂರುಗಳಿವೆ. ಮನೆಯೊಳಗೂ ಪ್ರವೇಶಿಸಿ ಪಾತ್ರೆಗಳು ಮತ್ತು ಆಹಾರವನ್ನು ನಾಶಪಡಿಸುವುದು ಸಹ ಸಾಮಾನ್ಯವಾಗಿದೆ. ಕಾಡಿನಿಂದ ದಾರಿ ತಪ್ಪಿದ ಮುಸುವಗಳ ಹಿಂಡು ತನ್ನ ಪರಾಕ್ರಮವನ್ನು ತೋರಿಸುತ್ತಿದ್ದು ಪರಿಸರ ನಿವಾಸಿಗಳು ಭೀತಿಗೊಳಗಾಗಿದ್ದಾರೆ.





