ನವದೆಹಲಿ: ಆಡಳಿತ ಪಕ್ಷದ ಪರವಾಗಿ ಪೊಲೀಸ್ ಅಧಿಕಾರಿಗಳು ಇರುವುದು ದೇಶದಲ್ಲಿ ನಿರ್ಮಾಣವಾಗಿರುವ ಗೊಂದಲಕಾರಿ ಟ್ರೆಂಡ್ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಗುರುವಾರ ಹೇಳಿದ್ದಾರೆ. ಆಡಳಿತ ಪಕ್ಷದ ಪ್ರತಿ ಸ್ಫರ್ಧಿಗಳನ್ನು ಪೊಲೀಸರು ಗುರಿಯಾಗಿಸುತ್ತಿದ್ದಾರೆ ಹಾಗೂ ತನಿಖೆಗೆ ರಾಜಕೀಯ ಪ್ರೇರಿತವಾಗುತ್ತಿದೆ ಎಂಬ ಆರೋಪದ ಬಗ್ಗೆ ಸುಪ್ರೀಂ ಕೋರ್ಟ್ ಖಡಕ್ ಆಗಿ ಪ್ರತಿಕ್ರಿಯೆ ನೀಡಿದೆ.
ಆಡಳಿತ ಪಕ್ಷವನ್ನು ಓಲೈಕೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಅಧಿಕಾರವನ್ನು ದುರುಪಯೋಗ ಮಾಡುತ್ತಿದ್ದಾರೆ ಹಾಗೂ ರಾಜಕೀಯ ವಿರೋಧ ಪಕ್ಷಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ," ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ. ಹಾಗೆಯೇ ಪೊಲೀಸ್ ಅಧಿಕಾರಿಗಳು ಕಾನೂನು ಏನಿದೆಯೋ ಅದನ್ನು ಪಾಲನೆ ಮಾಡಬೇಕು ಎಂದು ಹೇಳಿದೆ. ಈ ಹೊಸ ಟ್ರೆಂಡ್‌ಗೆ ಪೊಲೀಸರೇ ಹೊಣೆ ಎಂದು ಕೂಡಾ ಸುಪ್ರೀಂ ಕೋರ್ಟ್ ಹೇಳಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ದ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಾರಾಯಣ್ ರಾಣೆಯವರನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ದ ಭಾರೀ ಟೀಕೆಗಳು ಕೇಳಿ ಬರುತ್ತಿರುವ ನಡುವೆ ಸುಪ್ರೀಂ ಕೋರ್ಟ್ ಈ ಹೇಳಿಕೆಯನ್ನು ನೀಡಿದೆ.
ಇನ್ನು ನಾರಾಯಣ್ ರಾಣೆ ಅವರ ಬಿಜೆಪಿ ಪಕ್ಷವು ಆಡಳಿತಾರೂಢ ಶಿವಸೇನೆ ಪಕ್ಷವು ತಾಲಿಬಾನ್ ನಂತೆಯೇ ವರ್ತನೆ ತೋರುತ್ತಿದೆ ಹಾಗೂ ರಾಜಕೀಯ ವಿರೋಧಿಗಳಿಗೆ ಕಿರುಕುಳ ಮಾಡುತ್ತಿದೆ ಎಂದು ಆರೋಪ ಮಾಡಿದೆ. ಆದರೆ ಮಹಾರಾಷ್ಟ್ರ ಸರ್ಕಾರವು ಕೇಂದ್ರ ಸರ್ಕಾರದ ಏಜೆನ್ಸಿಗಳು ಮಾಜಿ ಸಚಿವ ಅನಿಲ್ ದೇಶ್ಮುಖ್ ಸೇರಿದಂತೆ ಹಲವಾರು ವಿಪಕ್ಷ ನಾಯಕರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪ ಮಾಡಿದೆ.
ಛತ್ತೀಸ್‌ಗಢದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ದ ದೇಶದ್ರೋಹದ ಆರೋಪ ಮಾಡಲಾಗಿದೆ ಹಾಗೂ ಅಮಾನತುಗೊಳಿಸಲಾಗಿದೆ. ಈ ಹಿನ್ನೆಲೆ ಛತ್ತೀಸ್‌ಗಢದ ಪೊಲೀಸ್ ಅಧಿಕಾರಿ ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್, "ಪೊಲೀಸರು ಆಡಳಿತ ಪಕ್ಷದ ಪರವಾಗಿ ಇರುವುದು ಗೊಂದಲಕಾರಿ ಟ್ರೆಂಡ್" ಎಂದು ಹೇಳಿದೆ.
ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) 1994 ರ ಬ್ಯಾಚ್‌ನ ಅಧಿಕಾರಿಯಾಗಿದ್ದ ಗುರ್ಜಿಂದರ್ ಪಾಲ್ ಸಿಂಗ್ ಭ್ರಷ್ಟಾಚಾರ ಮತ್ತು ಛತ್ತೀಸ್‌ಗಢ ಸರ್ಕಾರದ ವಿರುದ್ಧದ ಪಿತೂರಿ ಮಾಡಿದ್ದಾರೆ ಎಂದು ಆರೋಪ ಮಾಡಿ ಗುರ್ಜಿಂದರ್ ಪಾಲ್ ಸಿಂಗ್ ವಿರುದ್ದ ಎಫ್‌ಐಆರ್ ದಾಖಲು ಮಾಡಲಾಗಿದೆ. ಈ ಎಫ್‌ಐಆರ್ ಅನ್ನು ರದ್ದು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಹಾಗೆಯೇ ಈ ಹಿಂದಿನ ಬಿಜೆಪಿ ಆಡಳಿತದೊಂದಿಗೆ ಹತ್ತಿರವಾಗಿದ್ದೆ ಎಂಬ ಊಹೆಯಿಂದ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಈ ಕಾರ್ಯ ಮಾಡುತ್ತಿದೆ ಎಂದು ಗುರ್ಜಿಂದರ್ ಪಾಲ್ ಸಿಂಗ್ ದೂರಿದ್ದಾರೆ. ಸುಪ್ರೀಂ ಕೋರ್ಟ್ ಛತ್ತೀಸ್‌ಗಢ ಸರ್ಕಾರಕ್ಕೆ ಪೊಲೀಸ್ ಅಧಿಕಾರಿ ಗುರ್ಜಿಂದರ್ ಪಾಲ್ ಸಿಂಗ್‌ರನ್ನು ಬಂಧನ ಮಾಡದಂತೆ ಆದೇಶ ನೀಡಿದೆ. ಇನ್ನು ಗುರ್ಜಿಂದರ್ ಪಾಲ್ ಸಿಂಗ್ ವಿರುದ್ದ ಅಕ್ರಮ ಆಸ್ತಿ ಹೊಂದಿರುವ ಆರೋಪವೂ ಇದೆ.
ಕಳೆದ ತಿಂಗಳು ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಮದನ್ ಬಿ.ಲೋಕೂರ್ ಯುಎಪಿಎ ಕಾನೂನು ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ''ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ದೇಶದ್ರೋಹದ ಆರೋಪ ಹೊತ್ತು ತಿಂಗಳುಗಟ್ಟಲೆ ಜೈಲಿನಲ್ಲಿ ಬಳಲುತ್ತಿರುವ ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಮತ್ತು ನಾಗರಿಕ ಸಮಾಜದ ಸದಸ್ಯರ ಕುಟುಂಬಗಳಿಗೆ ಆಗುತ್ತಿರುವ ಮಾನಸಿಕ ಆಘಾತವನ್ನು ನ್ಯಾಯಾಲಯಗಳು, ಸಮಾಜ ಮತ್ತು ರಾಜ್ಯ ಗಮನಕ್ಕೆ ತೆಗೆದುಕೊಳ್ಳಬೇಕು,'' ಎಂದು ಹೇಳಿದ್ದರು.


