ಕಾಸರಗೋಡು: ರಾಜ್ಯ ಸರಕಾರದ 100 ದಿನಗಳ ಕ್ರಿಯಾಕಾರ್ಯಕ್ರಮ ಅಂಗವಾಗಿ ಎಲ್ಲರಿಗೂ ಜಾಗ ಎಂಬ ಗುರಿಯೊಂದಿಗೆ ಭೂಹಕ್ಕು ಪತ್ರ ವಿತರಣೆ ಮೇಳ ಜರುಗಲಿದೆ.
ಮೇಳದ ರಾಜ್ಯ ಮಟ್ಟದ ಉದ್ಘಾಟನೆ ಸೆ.14ರಂದು ತ್ರಿಶೂರು ಪುರಭವನದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಆನ್ ಲೈನ್ ರೂಪದಲ್ಲಿ ಉದ್ಘಾಟನೆ ನೆರವೇರಿಸುವರು.
ಈ ಕಾರ್ಯಕ್ರಮ ಸಂಬಂಧ ಕಾಸರಗೋಡು ಜಿಲ್ಲೆಯ 4 ತಾಲೂಕುಗಳಲ್ಲೂ ಭೂಹಕ್ಕು ಪತ್ರಗಳ ವಿತರಣೆ ನಡೆಯಲಿದೆ. ಕಾಸರಗೊಡು ತಾಲೂಕಿನ ಭೂಹಕ್ಕು ಪತ್ರ ವಿತರಣೆ ಜಿಲ್ಲಾಧಿಕಾರಿ ಕಚೇರಿಯಲ್ಲೂ, ಮಂಜೇಶ್ವರ, ಹೊಸದುರ್ಗ, ವೆಳ್ಲರಿಕುಂಡ್ ತಾಲೂಕುಗಳ ಭೂಹಕ್ಕು ಪತ್ರ ವಿತರಣೆ ಆಯಾ ತಾಲೂಕು ಕಚೇರಿಗಳಲ್ಲೂ ಜರುಗಲಿದೆ. ಜಿಲ್ಲೆಯ ಉಸ್ತುವಾರ ಸಚಿವ ಅಹಮ್ಮದ್ ದೇವರ್ ಕೋವಿಲ್, ಜಿಲ್ಲೆಯ ಶಾಸಕರಾದ ಸಿ.ಎಚ್.ಕುಂಞಂಬು, ಇ.ಚಂದ್ರಶೇಖರನ್, ಎ.ಕೆ.ಎಂ.ಅಶ್ರಫ್, ಎನ್.ಎ.ನೆಲ್ಲಿಕುನ್ನು, ಎಂ.ರಾಜಗೋಪಾಲನ್ ಮೊದಲಾದವರು ವಿವಿಧ ತಾಲೂಕುಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ಭಾಗವಹಿಸುವರು. ಕೋವಿಡ್ ಕಟ್ಟುನಿಟ್ಟುಗಳ ಪ್ರಕಾರ ಕಾರ್ಯಕ್ರಗಳು ಜರುಗಲಿವೆ.
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 579 ಭೂಹಕ್ಕು ಪತ್ರಗಳ ವಿತರಣೆ ಜರುಗಲಿದೆ. ಲಾಂಡ್ ಅಸೈನ್ಮೆಂಟ್, ಮಿಗತೆ ಭೂಮಿ, ಲಾಂಡ್ ಟ್ರಿಬ್ಯೂನಲ್, ದೇವಸ್ವಂ ಭೂಹಕ್ಕು ಇತ್ಯಾದಿಗಳ ವಿತರಣೆ ನಡೆಯಲಿದೆ.
ದಲ್ಲದೆ 2018 ವರೆಗಿನ ಎಲ್ಲ ಕಡತಗಳನ್ನೂ ತೀರ್ಪುಗೊಳಿಸುವ ನಿಟ್ಟಿನಲ್ಲಿ ಕಡತ ಅದಾಲತ್ ನಡೆಯಲಿದೆ. ಅಕ್ಟೋಬರ್ ತಿಂಗಳಿಂದ ಜಿಲ್ಲಾಧಿಕಾರಿ ಕಚೇರಿಯಿಂದ ತೊಡಗಿ ಗ್ರಾಮ ಕಚೇರಿಗಳ ವರೆಗಿನ ಕಡತಗಳನ್ನು ತೀರ್ಪಗೊಳಿಸಲಾಗುವುದು.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಲೋಚನೆ ಸಭೆ ಜರುಗಿತು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು. ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ , ಸಹಾಯಕ ಜಿಲ್ಲಾಧಿಕಾರಿ (ಎಲ್.ಆರ್.) ಕೆ.ರವಿಕುಮಾರ್, ಕಾಸರಗೋಡು ವಲಯ ಕಂದಾಯಾಧಿಕಾರಿ ಅತುಲ್ ಎಸ್.ನಾಥ್, ತಹಸೀಲ್ದಾರ್ ಗಳು ಉಪಸ್ಥಿತರಿದ್ದರು.

