ತಿರುವನಂತಪುರಂ: ರಾಜ್ಯದಲ್ಲಿ ಮತ್ತೊಮ್ಮೆ ಲಸಿಕೆಯ ಕೊರತೆ ಎದುರಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದರು. ರಾಜ್ಯದಲ್ಲಿ ಲಸಿಕೆ ಕೇವಲ 1.4 ಲಕ್ಷ ಡೋಸ್ ಮಾತ್ರ ಉಳಿದಿದೆ ಮತ್ತು ಕೇಂದ್ರ ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಸಚಿವೆ ಹೇಳಿದರು.
ಲಸಿಕೆ ಬಿಕ್ಕಟ್ಟು ಕೇರಳದ ಆರು ಜಿಲ್ಲೆಗಳ ಮೇಲೆ ಪರಿಣಾಮ ಬೀರುತ್ತಿದೆ. ಕಣ್ಣೂರು, ಕೋಝಿಕ್ಕೋಡ್, ತ್ರಿಶೂರ್, ಎರ್ನಾಕುಳಂ, ಕೊಟ್ಟಾಯಂ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.
ಎರಡನೇ ಡೋಸ್ ಪಡೆಯಲು ಕಾಯುತ್ತಿರುವ ಸಾಕಷ್ಟು ಜನರಿರುವುವ ಸಂದರ್ಭದಲ್ಲೇ ಲಸಿಕೆ ಕೊರತೆಯು ಉಲ್ಬಣಗೊಳ್ಳುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ವಿದೇಶಕ್ಕೆ ಹೋಗುವವರಿಗೂ ಕೋವಿಶೀಲ್ಡ್ ಲಸಿಕೆ ಅಗತ್ಯವಿದೆ. ಇದೇ ವೇಳೆ, ಕೊವಾಕ್ಸಿನ್ ಸ್ಲಾಟ್ ಗಳು ಇದೆ ಎಂದು ಸಚಿವೆ ಹೇಳಿರುವರು.
ರಾಜ್ಯದಲ್ಲಿ ಲಸಿಕೆಯ ತೀವ್ರ ಕೊರತೆಯ ಸಂದರ್ಭ ಕೋಝಿಕ್ಕೋಡ್ ಚೆರುಪ್ಪ ಆಸ್ಪತ್ರೆಯಲ್ಲಿನ ಸಿಬ್ಬಂದಿ ನಿರ್ಲಕ್ಷ್ಯದಿಂದ 800 ಡೋಸ್ ಲಸಿಕೆ ವ್ಯರ್ಥವಾಗಿದೆ. ದುರ್ವರ್ತನೆಯಿಂದ ಸುಮಾರು 8 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಘಟನೆ ಕುರಿತು ಆರೋಗ್ಯ ಇಲಾಖೆ ವಿವರಣೆ ಕೇಳಿದೆ.


