ಕಾಸರಗೋಡು: ಕಾಸರಗೋಡು ಸಂಚಾರಿ ಪೊಲೀಸ್ ಠಾಣೆ ಕಟ್ಟಡದಿಂದ ಬಿದ್ದು ಎಎಸ್ಐಯೋರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಎಎಸ್‌ಐ ಬಾಲಕೃಷ್ಣನ್ ಮುಳ್ಳೇರಿಯ (50) ತೀವ್ರವಾಗಿ ಗಾಯಗೊಂಡಿದ್ದಾರೆ. ಬುಧವಾರ ರಾತ್ರಿ 11.30 ರ ಸುಮಾರಿಗೆ ಈ ಘಟನೆ ನಡೆದಿದೆ.
ರಾತ್ರಿ ಆಹಾರ ಸೇವಿಸಿ ಠಾಣೆಯ ಮೇಲಿನ ಮಹಡಿಯಲ್ಲಿರುವ ಕೋಣೆಯಲ್ಲಿ ವಿಶ್ರಾಂತಿಗೆ ತೆರಳಿದ್ದರು ಎಂದು ಸಹ ಪೊಲೀಸ್ ಅಧಿಕಾರಿಗಳು ಹೇಳಿರುವರು. ತಲೆ ಸುತ್ತುವಿಕೆ ಇತ್ತೆಂದು ಪೊಲೀಸರು ಹೇಳುತ್ತಾರೆ. ಶಬ್ಧ ಕೇಳಿದ ತಕ್ಷಣ ಠಾಣೆಯ ಪರಿಸರದ ಜನರು ಅಂಗಳಕ್ಕೆ ಧಾವಿಸಿದ್ದು, ಎಎಸ್‌ಐ ಪ್ರಜ್ಞಾಹೀನರಾಗಿ ನೆಲದ ಮೇಲೆ ಬಿದ್ದಿರುವುದು ಕಂಡುಬಂತು.
ತಕ್ಷಣ ವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಸ್ಥಿತಿ ಗಂಭೀರವಾಗಿದ್ದರಿಂದ ಮಂಗಳೂರಿನ ಇಂಡಿಯಾನಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಎರಡೂ ಕಾಲುಗಳು ಮತ್ತು ಪಕ್ಕೆಲುಬುಗಳು ಗಂಭೀರವಾಗಿ ಗಾಯಗೊಂಡಿವೆ. ಅವರು ಪ್ರಜ್ಞಾಹೀನರಾಗಿರುವರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಅಧಿಕ ರಕ್ತದೊತ್ತಡದಿಂದ ಅವಘಡ ಸಂಭವಿಸಿದೆ. ಘಟನೆಯ ಬಗ್ಗೆ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದರು. ಅವರು ಮೇಲಂತಸ್ತಿನ ಕೊಠಡಿಯ ಹೊರಗಿನ ಬಾಲ್ಕನಿಯ ಮೂಲಕ ಕೆಳಗೆ ಬಿದ್ದಿರುವುದಾಗಿ ತಿಳಿದುಬಂದಿದೆ.



