ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಇದೀಗ ಮುದ್ದಾದ ಎರಡು ಗಂಡು ಮಕ್ಕಳ ತಾಯಿ. 40ನೇ ವಯಸ್ಸಿನಲ್ಲೂ ಅವರು ಸಿನಿಮಾಗಳಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡಿರುತ್ತಾರೆ.
ಆದರೆ, ಇತ್ತೀಚೆಗೆ ತಮ್ಮ ಮಕ್ಕಳ ಹೆಸರಿನ ಬಗ್ಗೆ ಜನ ಟ್ರೋಲ್ ಮಾಡಿ ಅವಮಾನ ಮಾಡಿದ್ದಕ್ಕೆ ಬೇಸರವನ್ನು 'ದಿ ಗಾರ್ಡಿಯನ್' ಪತ್ರಿಕೆ ನಡೆಸಿದ ಸಂದರ್ಶನದಲ್ಲಿ ಬೇಬೊ ಹಂಚಿಕೊಂಡಿದ್ದಾರೆ.
'ನನ್ನ ಮಕ್ಕಳ ಹೆಸರಿನ ಬಗ್ಗೆ ಜನ ಕೆಟ್ಟದಾಗಿ ಟ್ರೋಲ್ ಮಾಡಿದ್ದನ್ನು ಸ್ಮರಿಸಿಕೊಂಡರೆ ಅದೊಂದು ಭಯಾನಕ ಅನುಭವ ಎನಿಸುತ್ತದೆ' ಎಂದು ಹೇಳಿಕೊಂಡಿದ್ದಾರೆ.
2016 ರಲ್ಲಿ ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ದಂಪತಿಗೆ ಮೊದಲ ಮಗು ಜನನವಾಗಿತ್ತು. ಆಗ ಆ ಮಗುವಿಗೆ ತೈಮೂರ್ ಅಲಿಖಾನ್ ಎಂದು ಹೆಸರಿಡಲಾಗಿತ್ತು. 2021 ಫೆಬ್ರುವರಿ 21 ರಲ್ಲಿ ಕರೀನಾ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆ ಮಗುವಿಗೆ ಜಹಾಂಗೀರ್ ಅಲಿಖಾನ್ ಎಂದು ನಾಮಕರಣ ಮಾಡಲಾಗಿದೆ.
'ಈ ಹೆಸರುಗಳನ್ನು ನಮ್ಮ ಮಕ್ಕಳಿಗೆ ನಾವು ತುಂಬಾ ಇಷ್ಟಪಟ್ಟು ಇಟ್ಟಿದ್ದೇವೆ. ಅಷ್ಟೇ ಮುದ್ದಾದ ಮಕ್ಕಳವು. ಇದರಲ್ಲಿ ಬೇರೆ ಏನೂ ಇಲ್ಲ. ಆದರೂ ಜನ ಇವುಗಳಿಗೆ ಕೋಮು ಬಣ್ಣ ಕಟ್ಟಿ ಟ್ರೋಲ್ ಮಾಡಿ ವಿಕೃತ ಆನಂದ ಪಡೆಯುತ್ತಾರೆ. ಇದೊಂದು ಭಯಾನಕ ಅನುಭವ. ಇದನ್ನು ನಾನು ಮತ್ತೆ ನೋಡಲು ಇಷ್ಟಪಡುವುದಿಲ್ಲ' ಎಂದು ಹೇಳಿಕೊಂಡಿದ್ದಾರೆ.
ಇದೇ ಹಿನ್ನೆಲೆಯಲ್ಲಿ ಬ್ರಿಟಿಷ್ ಪತ್ರಿಕೆ, 'ಭಾರತದಲ್ಲಿ ಕೋಮು ಭಾವನೆ ಜಾಗೃತಗೊಂಡಿದೆಯೇ ಎಂದು ನಿಮಗನಿಸುತ್ತದೆಯೇ? ಎಂಬ ಪ್ರಶ್ನೆ ಕೇಳಿದಾಗ, 'ದಯವಿಟ್ಟು ನೀವು ನನ್ನನ್ನು ಇಂತಹ ಪ್ರಶ್ನೆಗಳನ್ನು ಕೇಳಬೇಡಿ' ಎಂದು ಕರೀನಾ ಅಸಮಾಧಾನವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಕರೀನಾ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.





