ಕಾಸರಗೋಡು: ಅರಣ್ಯ ಗಡಿಯ ಜನವಾಸ ಪ್ರದೇಶಗಳಲ್ಲಿ ಕಾಡಾನೆಗಳ ಉಪಟಳ ಅಧಿಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ "ಆಪರೇಷನ್ ಗಜ' ಯೋಜನೆಯನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ.
ಇಲ್ಲಿ ಕಾಡಾನೆಗಳು ನಡೆಸುತ್ತಿರುವ ನಾಶನಷ್ಟಗಳ ಹಿನ್ನೆಲೆಯಲ್ಲಿ, ಅವುಗಳನ್ನು ಮರಳಿ ಒಳಾಂತರ ಅರಣ್ಯಗಳಿಗೆ ಮರಳಿಸುವ ನಿಟ್ಟಿನಲ್ಲಿ ಈ ಯೋಜನೆ ಪುನರಾರಂಭಗೊಳಿಸಲಾಗುವುದು.
ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ನಡೆಸಿರುವ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಾಸರಗೋಡಿನಲ್ಲಿ ಈ ಹಿಂದೆ ನಡೆದಿದ್ದ ಸಚಿವ ಮಟ್ಟದ ಸಭೆಯ ತೀರ್ಮಾನದಂತೆ ಈ ಸಭೆ ಜರುಗಿದೆ.
ಅಕ್ರಮ ಬೇಟೆ, ಗಾಂಜಾ ಬೆಳೆ, ಅಕ್ರಮ ಸಾರಾಯಿ ನಿರ್ಮಾಣ ಇತ್ಯಾದಿ ಮಾಹಿತಿಗಳನ್ನು ಪರಸ್ಪರ ಹಸ್ತಾಂತರಿಸಿ ಕ್ರಮಗಳನ್ನು ಕೈಗೊಳ್ಳಲೂ ಸಭೆ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಜಂಟಿ ಕಾರ್ಯಾಚಾರಣೆಯನ್ನೂ ನಡೆಸಲಾಗುವುದು ಎಂದು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಸಿ.ಸಿ.ಎಫ್.ಡಿ.ಕೆ.ವಿನೋದ್ ಕುಮಾರ್, ಮಂಗಳೂರು ಡಿ.ಸಿ.ಎಫ್.ವಿ.ಕೆ.ದಿನೇಶ್ ಕುಮಾರ್, ಕಾಸರಗೋಡು ಡಿ.ಎಫ್.ಒ.ಪಿ.ಧನೇಶ್ ಕುಮಾರ್, ಎ.ಸಿ.ಎಫ್.ಅಜಿತ್ ಕೆ.ರಾಮನ್, ಉಭಯ ರಾಜ್ಯಗಳ ರೇಂಜ್ ಫಾರೆಸ್ಟ್ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.


