HEALTH TIPS

'ನಮ್ಮ ಲಸಿಕೆ ಪ್ರಮಾಣಪತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ': ಯುಕೆಗೆ ಭಾರತ

                 ನವದೆಹಲಿ: "ಭಾರತದ ಕೋವಿನ್‌ ಆಪ್‌ನಲ್ಲಿ ಆಗಲಿ ಅಥವಾ ಕೊರೊನಾ ಲಸಿಕೆ ಪ್ರಮಾಣ ಪತ್ರದಲ್ಲಿ ಆಗಲಿ ಯಾವುದೇ ಸಮಸ್ಯೆ ಇಲ್ಲ," ಎಂದು ಬುಧವಾರ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಆರ್‌ಎಸ್‌ ಶರ್ಮಾ ಹೇಳಿದ್ದಾರೆ.

               ಈ ಹಿಂದೆ ಯುನೈಟೆಡ್‌ ಕಿಂಗ್‌ಡಮ್‌ನ ಕೊರೊನಾ ವೈರಸ್‌ ಸೋಂಕು ಹಿನ್ನೆಲೆ ಜಾರಿಗೆ ತರಲಾದ ಹೊಸ ಪ್ರಯಾಣ ಮಾರ್ಗಸೂಚಿಯ ವಿಚಾರದಲ್ಲಿ ಭಾರೀ ವಿವಾದ ಉಂಟಾಗಿದ್ದು, ಈ ಹಿನ್ನೆಲೆ ಕೊನೆಗೂ ಯುಕೆ ಪ್ರಯಾಣ ಮಾರ್ಗಸೂಚಿಯನ್ನು ಪರಿಷ್ಕರಣೆ ಮಾಡಿದೆ. ಆದರೆ ಎರಡು ಕೊರೊನಾ ಲಸಿಕೆ ಡೋಸ್‌ಗಳನ್ನು ಪಡೆದವರು ಕೂಡಾ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಹೇಳಿದೆ. ಭಾರತದ ಕೋವಿಶೀಲ್ಡ್‌ ಲಸಿಕೆಯಲ್ಲಿ ಅಲ್ಲ ಕೊರೊನಾ ಲಸಿಕೆ ಪಡೆದ ಪ್ರಮಾಣ ಪತ್ರದಲ್ಲಿ ಸಮಸ್ಯೆ ಇದೆ ಎಂದು ಯುಕೆ ಹೇಳಿಕೊಂಡಿದೆ.

          ಯುಕೆಯ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಭಾರತವು, "ಕೋವಿಡ್‌ ಆಪ್‌ನಲ್ಲಿ ಆಗಲಿ ಅಥವಾ ಭಾರತದ ಕೊರೊನಾ ಪ್ರಮಾಣ ಪತ್ರದಲ್ಲಿ ಆಗಲಿ ಯಾವುದೇ ಸಮಸ್ಯೆ ಇಲ್ಲ. ಇದು ಸಂಪೂರ್ಣವಾಗಿ ವಿಶ್ವ ಆರೋಗ್ಯ ಸಂಸ್ಥೆಯ ನಿಯಮದಂತೆ ಇದೆ," ಎಂದು ತಿಳಿಸಿದೆ.

             "ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಜೊತೆಗೆ ನಾವು ಮಾತುಕತೆ ಮುಂದುವರಿಸುತ್ತೇವೆ. ನನ್ನನ್ನು ಯುಕೆ ಹೈ ಕಮಿಷನರ್ ಸೆಪ್ಟೆಂಬರ್‌ 2 ರಂದು ಭೇಟಿಯಾಗಿದ್ದಾರೆ. ಈ ಕೋವಿನ್‌ನ ತಾಂತ್ರಿಕ ಅಂಶಗಳ ಬಗ್ಗೆ ಅವರು ತಿಳಿಯಲು ಬಯಸಿದ್ದರು," ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಆರ್‌ಎಸ್‌ ಶರ್ಮಾ ತಿಳಿಸಿದ್ದಾರೆ. "ಈ ಬಗ್ಗೆ ಅವರಿಗೆ ಮಾಹಿತಿ ನೀಡಲಾಗಿದೆ ಹಾಗೂ ಅವರ ತಂಡದೊಂದಿಗೆ ಎರಡು ಬಾರಿ ಮಾತುಕತೆ ನಡೆದಿದೆ. ಅದು ತಾಂತ್ರಿಕ ಮಟ್ಟದ ಮಾತುಕತೆ," ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.

             ಈ ಬಗ್ಗೆ ಮಾತನಾಡಿರುವ ಬ್ರಿಟಿಷ್‌ ಕಮಿಷನರ್‌, "ಭಾರತದಲ್ಲಿ ಸಾರ್ವಜನಿಕ ಆರೋಗ್ಯ ಸಂಸ್ಥೆಯಿಂದ ಲಸಿಕೆಯನ್ನು ಪಡೆದ ಜನರಿಗೆ ಯುಕೆ ಪ್ರಮಾಣೀಕರಣದ ಮಾನ್ಯತೆಯನ್ನು ಹೇಗೆ ನೀಡುವುದು ಎಂಬ ಬಗ್ಗೆ ನಾವು ಭಾರತ ಸರ್ಕಾರದ ಜೊತೆಯಲ್ಲಿ ಮಾತುಕತೆ ನಡೆಸುತ್ತಿದ್ದೇವೆ," ಎಂದು ತಿಳಿಸಿದ್ದಾರೆ. ಪರಿಷ್ಕೃತ ಯುಕೆ ಪ್ರಯಾಣ ಮಾರ್ಗಸೂಚಿಯು ಈಗ, "ಆಸ್ಟ್ರಾಜೆನಿಕಾದ ಕೋವಿಶೀಲ್ಡ್‌, ಅಸ್ಟ್ರಾಜೆನೆಕಾದ ವ್ಯಾಕ್ಸ್‌ಜೆವ್ರಿಯಾ ಲಸಿಕೆಯನ್ನು ಪಡೆದವರಿಗೆ ಪ್ರವೇಶಕ್ಕೆ ಅನುಮೋದನೆ ನೀಡಲಾಗುವುದು," ಎಂದು ಹೇಳಿದೆ.

              ಕೊರೊನಾ ವೈರಸ್‌ ಸೋಂಕು ವಿರುದ್ದ ಸಂಪೂರ್ಣ ಲಸಿಕೆಯನ್ನು ಪಡೆದವರಿಗೆ ಎಲ್ಲಾ ವಿಮಾನ ಪ್ರಯಾಣಿಕರಿಗೆ ನಿರ್ಬಂಧವನ್ನು ನವೆಂಬರ್‌ ತಿಂಗಳಿನಿಂದ ಸಡಿಲಿಕೆ ಮಾಡಲಾಗುವುದು ಎಂದು ಸೋಮವಾರ ಅಮೆರಿಕ ಘೋಷಣೆ ಮಾಡಿದೆ. ಸುಮಾರು 33 ದೇಶಗಳಿಗೆ ಈ ಪ್ರಯಾಣ ನಿರ್ಬಂಧವನ್ನು ಸಡಿಲಿಕೆ ಮಾಡಿದ್ದು, ಭಾರತವು ಈ 33 ದೇಶಗಳಲ್ಲಿ ಇದೆ. ಭಾರತ ನಿರ್ಮಿತ ಕೋವಿಶೀಲ್ಡ್‌ ಲಸಿಕೆ ಮಾತ್ರ ಯುಎಸ್‌ನ ಈ ಅನುಮೋದಿತ ಲಸಿಕೆಗಳ ಪಟ್ಟಿಯಲ್ಲಿ ಇದೆ. ಆದರೆ ಈ ನಡುವೆ ಯುಕೆ ಮಾತ್ರ ಕೋವಿಶೀಲ್ಡ್‌ ಲಸಿಕೆಯನ್ನು ಪಡೆದವರನ್ನು ಲಸಿಕೆಯೇ ಪಡೆಯವರು ಎಂದು ಪರಿಗಣಿಸಲಾಗುವುದು ಎಂದು ಹೇಳಿದೆ.

              ಈ ನಿಟ್ಟಿನಲ್ಲಿ ಭಾರತದಲ್ಲಿ ಯುಕೆ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಯುಕೆಯ ಈ ನೂತನ ಪ್ರಯಾಣ ಮಾರ್ಗಸೂಚಿ ವಿಚಾರದಲ್ಲಿ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ವಾ‌ಗ್ದಾಳಿ ನಡೆಸಿದ್ದಾರೆ. ಈ ನೂತನ ಕೋವಿಡ್‌ ಹಿನ್ನೆಲೆಯ ಪ್ರಯಾಣ ಮಾರ್ಗಸೂಚಿಯು "ವರ್ಣಭೇದ ಮಾಡುವಂತದ್ದು ಆಗಿದೆ" ಹಾಗೂ "ಸಂಪೂರ್ಣವಾಗಿ ವಿಚಿತ್ರವಾದುದು" ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅಭಿಪ್ರಾಯಿಸಿದ್ದಾರೆ. "ಕೋವಿಶೀಲ್ಡ್‌ ಲಸಿಕೆಯನ್ನು ಮೂಲವಾಗಿ ಯುಕೆಯಲ್ಲಿಯೇ ಅಭಿವೃದ್ದಿ ಪಡಿಸಲಾಗಿದೆ. ಹಾಗೆಯೇ ಪುಣೆಯ ಸೀರಮ್‌ ಸಂಸ್ಥೆಯಲ್ಲಿ ಈ ಕೋವಿಶೀಲ್ಡ್‌ ಲಸಿಕೆಯ ಉತ್ಪಾದನೆ ಮಾಡಿ ಯುಕೆಗೂ ರಫ್ತು ಮಾಡಲಾಗಿದೆ. ಹೀಗಿರುವಾಗ ಈಗ ಯುಕೆಯೇ ಕೋವಿಶೀಲ್ಡ್‌ನ ಎರಡು ಡೋಸ್‌ ಲಸಿಕೆ ಹಾಕಿದರೂ ಕೂಡಾ ಅವರನ್ನು ಲಸಿಕೆ ಪಡೆಯದವರು ಎಂದು ಪರಿಗಣಿಸುವುದು ವಿಚಿತ್ರ. ಇದು ವರ್ಣಭೇದ ನೀತಿಯ ಮೇಲಿನ ಒಂದು ಭಾಗ," ಎಂದು ಹೇಳಿದ್ದಾರೆ.

            ಭಾರತ ಸರ್ಕಾರವು ಯುಕೆಗೆ ಖಡಕ್‌ ಎಚ್ಚರಿಕೆಯನ್ನು ಕೂಡಾ ನೀಡಿದೆ. ಈ ಬಗ್ಗೆ ಭಾರತ ಸರ್ಕಾರದ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್‌ ಶ್ರಿಂಗ್ಲಾ ಮಾತನಾಡಿ, "ಈ ಕ್ರಮವು ಭಾರತದ ನಾಗರಿಕರ ಮೇಲೆ ಪರಿಣಾಮ ಬೀರಲಿದೆ. ಪರಸ್ಪರ ವಿರುದ್ದ ಕ್ರಮವನ್ನು ಕೈಗೊಳ್ಳುವ ಹಕ್ಕು ನಮಗೂ ಇದೆ," ಎಂದು ಎಚ್ಚರಿಕೆ ನೀಡಿದ್ದಾರೆ. "ಕೋವಿಶೀಲ್ಡ್‌ ಅನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇರುವುದು ಯುಕೆ ಸರ್ಕಾರದ ತಾರತಮ್ಯ ನೀತಿ. ನೂತನ ಯುಕೆ ವಿದೇಶಾಂಗ ಕಾರ್ಯದರ್ಶಿಯ ಬಳಿ ಈ ವಿಚಾರವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು ಈಗಾಗಲೇ ಪ್ರಸ್ತಾಪ ಮಾಡಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಬೇಕಾದ ಅಗ್ತಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಯುಕೆಯು ಭರವಸೆಯನ್ನು ನೀಡಿದೆ," ಎಂದು ಕೂಡಾ ತಿಳಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries