HEALTH TIPS

ಸಾಮಾನ್ಯ ಕೃಷಿಕನಿಂದ ಭಾರತ ಕ್ರಿಕೆಟ್ ತಂಡಕ್ಕೆ ಚಿಯರ್ ಅಪ್ ಮಾಡಿಸಿದ ಸ್ಟಾರ್ ಸ್ಪೋರ್ಟ್ಸ್!

               ಮಂಗಳೂರು: ದೇಶದಲ್ಲಿ ಕ್ರಿಕೆಟ್ ಫೀವರ್ ಆರಂಭವಾಗಿದೆ. ಐಪಿಎಲ್ ಮುಗಿದ ಬಳಿಕ ಟಿ-20 ವಿಶ್ವಕಪ್ ಆರಂಭವಾಗಲಿದ್ದು, ವಿರಾಟ್ ಕೊಹ್ಲಿ ನೇತೃತ್ವದ ಯಂಗ್ ಟೀಂ ಇಂಡಿಯಾ ವಿಶ್ವಕಪ್‌ಗಾಗಿ ಸೆಣಸಾಟ ಮಾಡಲಿದೆ. ಈ ಬಾರಿ ವಿಶ್ವಕಪ್‌ನ್ನು ಟೀಂ ಇಂಡಿಯಾ ಗೆಲ್ಲಲಿ ಅನ್ನುವುದು ಕೋಟ್ಯಂತರ ಭಾರತೀಯರ ಆಸೆಯಾಗಿದೆ.

              ಕ್ರಿಕೆಟ್‌ನ್ನು ಜನರಿಗೆ ತಲುಪಿಸುವ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಈ ಬಾರಿ ವಿಭಿನ್ನವಾಗಿ ಟೀಂ ಇಂಡಿಯಾಗೆ ಶುಭಕೋರಲು ಸಿದ್ಧತೆ ಮಾಡಿಕೊಂಡಿದೆ. ದೇಶ-ವಿದೇಶಗಳಲ್ಲಿ ಬಿತ್ತರಗೊಳ್ಳುವ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಟೀಂ ಇಂಡಿಯಾ ಶುಭಕೋರಲು ತಯಾರಿಸಿರುವ ಜಾಹೀರಾತಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕನೋರ್ವರಿಗೆ ಅವಕಾಶ ಸಿಕ್ಕಿದೆ.

                         ಅಡಿಕೆ ಮರವೇರುವ ಟ್ರೀ ಬೈಕ್ ನಿರ್ಮಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪ್ರಗತಿ ಪರ ಕೃಷಿಕ ಗಣಪತಿ ಭಟ್ ಹಾಗೂ ಅವರ ಪುತ್ರಿ ಸುಪ್ರಿಯಾ ಭಟ್‌ಗೆ ಟೀಂ ಇಂಡಿಯಾಗೆ ಆಲ್ ದಿ ಬೆಸ್ಟ್ ಹೇಳುವ ಅವಕಾಶ ಲಭ್ಯವಾಗಿದೆ.



                        2019ರ ವೇಳೆಗೆ ಯಂತ್ರ ತಯಾರಿಸಿದ ಗಣಪತಿ ಭಟ್‌

             ಗಣಪತಿ ಭಟ್‌ರವರ ಟ್ರೀ ಬೈಕ್‌ಗೆ ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳಿಂದ ಬೇಡಿಕೆ ಬಂದಿದೆ. ಬುಕ್ಕಿಂಗ್ ಸಿಸ್ಟಮ್‌ನಲ್ಲಿ ಗಣಪತಿ ಭಟ್‌ರವರ ಟ್ರೀ ಬೈಕ್ ಮಾರಾಟವಾಗುತ್ತಿದೆ. ಸಾಮಾನ್ಯ ಕೃಷಿಕನಿಗೆ ಅಸಾಮಾನ್ಯ ಯಂತ್ರದ ಐಡಿಯಾ ಹೊಳೆದಿದ್ದೇ ಬಹು ವಿಶೇಷ. ಸುಮಾರು 14 ಎಕರೆ ಅಡಿಕೆ ತೋಟವನ್ನು ಹೊಂದಿರುವ ಗಣಪರಿ ಭಟ್ 2018ರ ಇಸವಿಯಲ್ಲಿ ತೋಟದಲ್ಲಿ ಕಾರ್ಮಿಕರಿಲ್ಲದೆ ಕೈಚೆಲ್ಲಿ ಕೂತಾಗ ಅವರ ತಲೆಗೆ ಹೊಳೆದಿದ್ದೇ ಅಡಿಕೆ ಮರವೇರುವ ಯಂತ್ರ ತಯಾರಿಸುವ ಗುರಿ. 2019ರ ವೇಳೆಗೆ ಯಂತ್ರ ತಯಾರಿಸಿದ ಗಣಪತಿ ಭಟ್‌ರವರು ತಾನಂದುಕೊಂಡಿದ್ದನ್ನು ಸಾಧಿಸಿದ್ದಾರೆ. ಸುಮಾರು 110 ಕೆಜಿಯ ವ್ಯಕ್ತಿಯೂ ಸುರಕ್ಷಿತವಾಗಿ ಸುಲಲಿತವಾಗಿ ಅಡಿಕೆ ಮರವನ್ನು ಏರಬಹುದಾಗಿದೆ. ಗಣಪತಿ ಭಟ್‌ರವರ ಈ ಸಂಶೋಧನೆಗೆ ಮಹೀಂದ್ರಾ ಕಂಪೆನಿ ಸಂಸ್ಥಾಪಕ ಆನಂದ್ ಮಹೀಂದ್ರಾ ಸೇರಿದಂತೆ ದಿಗ್ಗಜ ಉದ್ಯಮಿಗಳೇ ಶಹಬ್ಬಾಸ್ ಹೇಳಿದ್ದರು.

                       ಭಾರತ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳುವ ದೃಶ್ಯ ಚಿತ್ರೀಕರಣ

              ಗಣಪತಿ ಭಟ್‌ರವರ ಈ ಅವಿಷ್ಕಾರ ದೇಶ- ವಿದೇಶಗಳಲ್ಲಿರುವ ಕೃಷಿಕರ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ ಕೃಷಿಕರಿಗೆ ವರದಾನವಾಗಿರುವ ಟ್ರೀ ಬೈಕ್ ಅವಿಷ್ಕರಿಸಿದ ಗಣಪತಿ ಭಟ್‌ಗೆ ವಿಶೇಷ ಗೌರವ ನೀಡಲು ಅಂತಾರಾಷ್ಟ್ರೀಯ ಕ್ರೀಡಾ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ಮುಂಬರುವ ಟಿ- 20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಗೆದ್ದುಬರುವಂತೆ ಚಿಯರ್ ಅಪ್ ಜಾಹಿರಾತು ಒಂದನ್ನು ಇತ್ತೀಚೆಗೆ ಶೂಟ್ ಮಾಡಿದ್ದು, ಅದರಲ್ಲಿ ಗಣಪತಿ ಭಟ್ಟರು ಹಾಗು ಅವರ ಮಕ್ಕಳು ಟ್ರೀ ಬೈಕ್ ಮೂಲಕ ಅಡಿಕೆ ಮರವೇರುತ್ತ ಭಾರತ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳುವ ದೃಶ್ಯ ಚಿತ್ರೀಕರಣ ಮಾಡಲಾಗಿದೆ.

ಭಾರತದ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ತಾನೇ ಅವಿಷ್ಕರಿಸಿದ ಟ್ರೀ ಬೈಕ್ ಮೂಲಕ ಅಡಿಕೆ ಮರವೇರುತ್ತ ಭಾರತ ತಂಡವನ್ನು ಹುರಿದುಂಬಿಸುವ ದೃಶ್ಯವನ್ನು ಅವರ ತೋಟದಲ್ಲೇ ಚಿತ್ರೀಕರಣ ಮಾಡಲಾಗಿದೆ.

                            ಜಾಹೀರಾತಿನಲ್ಲಿ ದೇಶೀಯ ನಿರ್ಮಿತ ಟ್ರೀ ಬೈಕ್ ಬಳಕೆ

             ಗಣಪತಿ ಭಟ್‌ರವರ ಯಂತ್ರ ಇಂಧನ ಚಾಲಿತವಾಗಿದೆ. ಒಂದು ಲೀಟರ್ ಪೆಟ್ರೋಲ್‌ನಿಂದ 90 ಅಡಿಕೆ ಮರವನ್ನು ಏರಬಹುದಾಗಿದೆ. ದೇಶೀಯ ಟ್ರೀ ಬೈಕ್ ಕಡಿಮೆ ಅವಧಿಯಲ್ಲಿ ರೈತರ ಗಮನ ಸೆಳೆದಿರುವುದಲ್ಲದೆ, ದೇಶ- ವಿದೇಶಗಳಲ್ಲಿ ಜನಪ್ರಿಯತೆ ಪಡೆದು ಬೇಡಿಕೆ ಸೃಷ್ಟಿಸಿದೆ. ಇದರಿಂದ ಪ್ರೇರಿತಗೊಂಡ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಮುಂದಿನ ಟಿ- 20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆ ಭಾರತ ಕ್ರಿಕೆಟ್ ತಂಡವನ್ನು ಪ್ರೋತ್ಸಾಹಿಸಿ ಹುರಿದುಂಬಿಸಲು ತನ್ನ ಜಾಹೀರಾತಿನಲ್ಲಿ ದೇಶೀಯ ನಿರ್ಮಿತ ಟ್ರೀ ಬೈಕ್‌ನ್ನು ಬಳಸಿಕೊಳ್ಳಲು ತೀರ್ಮಾನಿಸಿದೆ. ಆ ಮೂಲಕ ಗ್ರಾಮೀಣ ಪ್ರತಿಭೆಗೆ ಮನ್ನಣೆ ನೀಡಲು ಅಂತಾರಾಷ್ಟ್ರೀಯ ವಾಹಿನಿ ಮುಂದಾಗಿದೆ.

                ಗಣಪತಿ ಭಟ್ ಪುತ್ರಿ ಸುಪ್ರಿಯಾ ಭಟ್ ಹಾಗೂ ಪುತ್ರ ಶ್ರೀವರ ಭಟ್ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಟ್ರೀ ಬೈಕ್‌ನಲ್ಲಿ ಅಡಿಕೆ ಮರವೇರುತ್ತಾ ಭಾರತ ತಂಡ ಗೆದ್ದು ಬರುವಂತೆ ಶುಭ ಹಾರೈಸುವ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಭಟ್ಟರ ಅಡಿಕೆ ತೋಟ, ಮನೆಯಂಗಳ, ಒಳಾಂಗಣದಲ್ಲಿ ಕ್ರಿಕೆಟ್ ಆಡುವ ದೃಶ್ಯಗಳನ್ನು ಚಿತ್ರೀಕರಿಸಿದ್ದು, ಇಂಗ್ಲಿಷ್, ಹಿಂದಿ, ಕನ್ನಡ ಮಾತ್ರವಲ್ಲದೆ ತುಳು ಭಾಷೆಯಲ್ಲಿಯೂ ಕ್ರಿಕೆಟ್ ತಂಡವನ್ನು ಹುರಿದುಂಬಿಸುವ ದೃಶ್ಯವನ್ನು ಚಿತ್ರೀಕರಣಗೊಳಿಸಲಾಗಿದೆ.

ಭಾರತದಲ್ಲಿ ರೈತರೂ ಕ್ರಿಕೆಟ್ ಅಭಿಮಾನಿಗಳೇ

              ಒಟ್ಟು 5 ನಿಮಿಷದ ವಿಡಿಯೋ ಟಿ-20 ಕ್ರಿಕೆಟ್ ಪಂದ್ಯದ ವಿರಾಮದ ವೇಳೆ ಪ್ರಸಾರಗೊಳ್ಳಲಿದೆ. ಭಾರತದಲ್ಲಿ ರೈತರೂ ಕ್ರಿಕೆಟ್ ಅಭಿಮಾನಿಗಳೇ, ಅವರಿಂದಲೇ ಭಾರತದ ಕ್ರಿಕೆಟ್ ತಂಡ ಮತ್ತೊಮ್ಮೆ ವಿಶ್ವಕಪ್ ಗೆದ್ದು ತರಲಿ ಎಂದು ಸಂದೇಶ ನೀಡುವ ವಿಡಿಯೋ ಪ್ರಸಾರವಾಗುವಾಗ ರೈತರ ಮೊಗದಲ್ಲೂ ಮಂದಹಾಸ ಮೂಡಿಸಲಿದೆ. ಒಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪರಿಕಲ್ಪನೆ ಆತ್ಮನಿರ್ಭರ ಭಾರತಕ್ಕೆ ಉತ್ತಮ ಉದಾಹರಣೆಯಾಗಿರುವ ಗಣಪತಿ ಭಟ್‌ರವರನ್ನು ಸ್ಟಾರ್ ಸ್ಪೋರ್ಟ್ಸ್ ಗುರುತಿಸಿ, ಕರುನಾಡಿನ ಏಕೈಕ ಕೃಷಿಕನಿಗೆ ಮನ್ನಣೆ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries