HEALTH TIPS

ಕಾಂಗ್ರೆಸ್‌, ಬಿಜೆಪಿ ನಡುವೆ ವಾಕ್ಸಮರ ಸೃಷ್ಟಿಸಿದ ಬಿಷಪ್‌ ಹೇಳಿಕೆ!

                 ತಿರುವನಂತಪುರ'ಕೇರಳದಲ್ಲಿ ಲವ್‌ ಹಾಗೂ ಮಾದಕವಸ್ತು ಜಿಹಾದ್‌ ನಡೆಯುತ್ತಿದೆ' ಎಂಬ ಪಾಲಾ ಜೋಸೆಫ್‌ ಕಲ್ಲರಂಗಾಟ್‌ ಅವರ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಆರಂಭವಾಗಿರುವ ವಾಕ್ಸಮರ ಈಗ ತೀವ್ರಗೊಂಡಿದೆ.

             'ಕೇರಳದಲ್ಲಿ ಸಂಘ ಪರಿವಾರ ನೆಲೆಯೂರುವುದನ್ನು ತಾನು ಬಯಸುವುದಿಲ್ಲ' ಎಂದು ಕಾಂಗ್ರೆಸ್‌ ಮುಖಂಡರು ಭಾನುವಾರ ಹೇಳಿದ್ದಾರೆ. 'ಈ ವಿಷಯವನ್ನು ಮುಂದಿಟ್ಟುಕೊಂಡು ಸಿಪಿಎಂ ಹಾಗೂ ಕಾಂಗ್ರೆಸ್‌ ಪಕ್ಷಗಳು ಬಿಷಪ್‌ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿವೆ' ಎಂದು ಬಿಜೆಪಿ ಪಾಳೆಯ ತಿರುಗೇಟು ನೀಡಿದೆ.

            ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ಮುಖಂಡ ಕೆ.ಮುರಳೀಧರನ್, 'ಬಿಷಪ್‌ ಅವರ ಮೇಲೆ ಪಕ್ಷ ದಾಳಿ ಮಾಡುತ್ತಿಲ್ಲ' ಎಂದರು.

             'ರಾಜ್ಯದ ದಕ್ಷಿಣ ಭಾಗದಲ್ಲಿ ಮದ್ಯ ಹಾಗೂ ಮಾದಕವಸ್ತುಗಳ ಮಾಫಿಯಾ ತೀವ್ರವಾಗಿರುವುದು ನಿಜ. ಈ ವಿಷಯವನ್ನೇ ಮುಂದು ಮಾಡಿ ಒಂದು ಸಮುದಾಯದ ವಿರುದ್ಧ ಆರೋಪ ಹೊರಿಸುವುದು ತಪ್ಪು ಎಂಬುದನ್ನು ಪಕ್ಷ ಹೇಳುತ್ತಿದೆಯಷ್ಟೇ' ಎಂದರು.

           'ರಾಜ್ಯದಲ್ಲಿ ಕೋಮು ಸೌಹಾರ್ದ ಹಾಳಾಗುವುದನ್ನಾಗಲಿ ಅಥವಾ ಸಂಘ ಪರಿವಾರ ಅಸ್ತಿತ್ವ ಕಂಡುಕೊಳ್ಳುವುದನ್ನಾಗಲಿ ಕಾಂಗ್ರೆಸ್‌ ಇಷ್ಟಪಡುವುದಿಲ್ಲ' ಎಂದು ಹೇಳಿದರು.

            ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್‌, 'ಬಿಷಪ್‌ ಅವರು ಭಯೋತ್ಪಾದನೆ ವಿರುದ್ಧ ಮಾತನಾಡಿದ್ದಾರೆ. ಅವರ ಮಾತುಗಳು ಕಾಂಗ್ರೆಸ್‌ ಹಾಗೂ ಸಿಪಿಎಂ ಪಕ್ಷಗಳಿಗೆ ಬಲವಾಗಿ ತಿವಿದಿವೆ. ಇದನ್ನು ಸಹಿಸಲಾಗದೇ ಆ ಎರಡು ಪಕ್ಷಗಳು ಬಿಷಪ್‌ ಅವರ ವಿರುದ್ಧ ಟೀಕೆ ಮಾಡುತ್ತಿವೆ' ಎಂದರು.

          ಎಸ್‌ಎನ್‌ಡಿಪಿ ಮುಖಂಡ ವೆಲ್ಲಪಳ್ಳಿ ನಟೇಶನ್‌ ಅವರ 84ನೇ ಜನ್ಮದಿನದ ಸಂದರ್ಭದಲ್ಲಿ ಮಾತನಾಡಿದ ಸುರೇಂದ್ರನ್‌, 'ಕಾಂಗ್ರೆಸ್‌ ಹಾಗೂ ಸಿಪಿಎಂ ಮುಖಂಡರ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಮತ ಬ್ಯಾಂಕ್‌ ರಾಜಕಾರಣದ ಉದ್ದೇಶದಿಂದ ಆ ಎರಡೂ ಪಕ್ಷಗಳು ಧಾರ್ಮಿಕ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವುದು ಸ್ಪಷ್ಟವಾಗುತ್ತದೆ' ಎಂದೂ ಟೀಕಿಸಿದರು.

'ಈ ಎರಡು ಪಕ್ಷಗಳಿಂದ ದಾಳಿಗೆ ಒಳಗಾಗುತ್ತಿರುವ ಬಿಷಪ್‌ ಅವರಿಗೆ ಬಿಜೆಪಿ ಎಲ್ಲ ರೀತಿಯ ಬೆಂಬಲ ನೀಡಲಿದೆ' ಎಂದು ಅವರು ಹೇಳಿದರು.

             'ಕೇರಳದಲ್ಲಿ ಕ್ರೈಸ್ತ ಯುವತಿಯರು ಲವ್‌ ಹಾಗೂ ಮಾದಕವಸ್ತು ಜಿಹಾದ್‌ನ ಬಲಿಪಶುಗಳಾಗುತ್ತಿದ್ದಾರೆ. ಶಸ್ತ್ರಾಸ್ತ್ರಗಳನ್ನು ಬಳಸಲು ಸಾಧ್ಯವಿಲ್ಲದ ಸ್ಥಳಗಳಲ್ಲಿ ಉಗ್ರರು ಇಂಥ ಮಾರ್ಗಗಳನ್ನು ಬಳಸಿ, ಯುವ ಸಮುದಾಯವನ್ನು ನಾಶ ಮಾಡುತ್ತಾರೆ' ಎಂದು ಬಿಷಪ್‌ ಕಲ್ಲರಂಗಾಟ್‌ ಇತ್ತೀಚೆಗೆ ಹೇಳಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries