ಬದಿಯಡ್ಕ: ಬೆಳೆಯುತ್ತಿರುವ ಜನಸಂಖ್ಯೆ, ಬೇಡಿಕೆಯ ಹೆಚ್ಚಳದ ಕಾರಣಗಳಿಂದ ವಿವಿಧ ಆಹಾರೋತ್ಪನ್ನಗಳ ಪೂರೈಕೆಯಲ್ಲಿ ದೊಡ್ಡ ಸವಾಲುಗಳು ಎದುರಾಗಲಿದೆ. ಈ ನಿಟ್ಟಿನಲ್ಲಿ ಅನಗತ್ಯ ಕಾಡು-ಮರಗಳನ್ನು ನಿವಾರಿಸಿ ಅಲ್ಲಿ ಆಹಾರೋತ್ಪನ್ನಗಳನ್ನು, ಹಣ್ಣಿನ ಮರಗಳನ್ನು ನೆಟ್ಟು ಬೆಳೆಸುವ ಮಹಾ ಅಭಿಯಾನಕ್ಕೆ ತುರ್ತು ನಾಂದಿ ಹಾಡುವ ಅಗತ್ಯ ಇದೆ ಎಂದು ನಬಾರ್ಡ್ ಕಾಸರಗೋಡು ವಲಯದ ಡಿ.ಡಿಎಂ. ದಿವ್ಯಾ ಕೆ.ಬಿ. ತಿಳಿಸಿದರು.
ನಬಾರ್ಡ್ ಕೆ.ಎಫ್.ಡಬ್ಲ್ಯು ಮಣ್ಣು ಯೋಜನೆಯ ನೇತೃತ್ವದಲ್ಲಿ ನೀರ್ಚಾಲು ಕಿಳಿಂಗಾರು ಸಮೀಪದ ಮುಗು ವಾಟರ್ ಶೆಡ್ ಸಹಕಾರದೊಂದಿಗೆ ಹೊಸಮನೆಯಲ್ಲಿ ಗುರುವಾರ ನಡೆದ "ಬದಲಿ ಬೆಳೆ ಮಾದರಿ ತೋಟಗಾರಿಕೆ" ಯೋಜನೆಯ ನಾಮ ಫಲಕ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕಿ ಆರ್.ವೀಣಾರಾಣಿ ಅವರು ವಿವಿಧ ಹಣ್ಣುಗಳ ನಾಟಿಗೆ ಈ ಸಂದರ್ಭ ಚಾಲನೆ ನೀಡಿದರು. ಅವರು ಮಾತನಾಡಿ, ಬಂಜರು ನೆಲ, ಅನುಪಯುಕ್ತ ಕಾಡುಗಳನ್ನು ಕಡಿದು ಹಣ್ಣುಗಳ ಬೆಳೆಗೆ ಮುಗು ವಾಟರ್ ಶೆಡ್ ತಂಡದವರು ತೊಡಗಿಸಿಕೊಂಡು ಇರಿಸಿರುವ ಹೆಜ್ಜೆ ಕ್ರಾಂತಿಕಾರಕವಾದುದು. ಈ ಮೂಲಕ ಹೊಸತೊಂದು ಕೃಷಿ ಕ್ರಾಂತಿ ಸೃಷ್ಟಿ ಮತ್ತು ಇತರೆಡೆಗಳಿಗೆ ಪ್ರೇರಣೆಯಾಗಲಿದೆ. ಸರ್ಕಾರದ ಎಲ್ಲಾ ನೆರವನ್ನೂ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಆನಂದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯೆ ಜಯಶ್ರೀ, ಬದಿಯಡ್ಕ ಕೃಷಿ ಭವನದ ಕೃಷಿ ಅಧಿಕಾರಿ ಶಿವಕುಮಾರ್ ವಿ., ಸಿ.ಆರ್.ಡಿ. ಯೋಜನಾ ಸಂಯೋಜಕ ಶಾಜಿ ಇ.ಸಿ, ಸಿ.ಆರ್.ಡಿ. ವಾಟರ್ ಶೆಡ್ ಪ್ರಬಂಧಕ ಡಿ.ಕೆ.ನಾರಾಯಣ ನಾಯರ್, ಮುಗು ವಾಟರ್ ಶೆಡ್ ಅಧ್ಯಕ್ಷ ಜಯದೇವ ಖಂಡಿಗೆ, ಕಾರ್ಯದರ್ಶಿ ಶಿವಪ್ರಸಾದ್ ಎಚ್.ಎಂ., ಸದಸ್ಯ ರಾಧಾಕೃಷ್ಣ ಭಟ್, ರಾಜೇಶ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ಯೋಜನಾ ಸಂಯೋಜಕ ಶಾಜಿ ಇ.ಸಿ. ಸ್ವಾಗತಿಸಿದರು. ಮುಗು ವಾಟರ್ ಶೆಡ್ ಕಾರ್ಯದರ್ಶಿ ಶಿವಪ್ರಸಾದ್ ಎಚ್.ಎಂ. ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು.
ಮುಗು ವಾಟರ್ ಶೆಡ್ ನೇತೃತ್ವದಲ್ಲಿ ಹೊಸಮನೆ ಪರಿಸರದಲ್ಲಿ 1.5 ಎಕ್ರೆ ಭೂಮಿಯಲ್ಲಿ 500ಕ್ಕಿಂತಲೂ ಹೆಚ್ಚು ವಿವಿಧ ಹಣ್ಣಿನ ಗಿಡಗಳಾದ ಚಿಕ್ಕು, ಪೇರಳೆ, ನೆಲ್ಲಿ, ನೇರಳೆ, ಮುಸುಂಬಿ, ಲಿಂಬೆ, ನುಗ್ಗೆ, ಹಲಸು ಮೊದಲಾದ ಗಿಡಗಳನ್ನು ನಾಟಿ ಮಾಡಲಾಯಿತು. ಕಾಡು-ಪೊದೆಗಳಿಂದ ಆವೃತವಾಗಿದ್ದ ಅನಪೇಕ್ಷಿತ ಪ್ರದೇಶವನ್ನು 3 ಲಕ್ಷ ರೂ.ಗಳಲ್ಲಿ ಯೋಗ್ಯ ಕೃಷಿ ಭೂಮಿಯಾಗಿ ಈ ಹಣ್ಣುಗಳ ನಾಟಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಮುಗು ವಾಟರ್ ಶೆಡ್ ನ ನಿತ್ಯ ನಿರಂತರ ಕೃಷಿ ಚಟುವಟಿಕೆಯ ಹೆಮ್ಮೆಯ ಯೋಜನೆಯಾಗಿ ಪ್ರಶಂಸೆಗೆ ಪಾತ್ರವಾಗಿದೆ.







