ಉಪ್ಪಳ: ತೀರ್ಥ ಅಮಾವಾಸ್ಯೆಯ ದಿನವಾದ ಮಂಗಳವಾರ ಬಾಯಾರುಪದವು ಸಮೀಪದ ಪುರಾಣ ಪ್ರಸಿದ್ಧ ಪೆÇಸಡಿ ಗುಂಪೆ ಪವಿತ್ರ ಗುಹಾ ಪ್ರವೇಶ ನಡೆಯಿತು. ಬೆಳಗ್ಗೆ 6 ಗಂಟೆ ಸುಮಾರಿಗೆ ಆರಂಭವಾದ ಗುಹಾ ಪ್ರವೇಶ ಕೋವಿಡ್ ಮಾನದಂಡಗಳ ಕಾರಣ ಸೀಮಿತ ಸಂಖ್ಯೆಯ ಜನಸಹಭಾಗಿತ್ವದೊಂದಿಗೆ ಭಾಗವಹಿಸಿ ವಿಭೂತಿ ಸಂಗ್ರಹಿಸಿ ಪುನೀತರಾದರು. ಪೆÇಸಡಿ ಗುಂಪೆ ಕಾನ ತರವಾಡಿನ ಶ್ರೀಕೃಷ್ಣ ಭಟ್ ಮತ್ತು ರವೀಶ್ ಭಟ್ ಗುಂಪೆ ನೆಲ್ಲಿ ತೀರ್ಥಕ್ಕೆ ಪುಷ್ಪಗಳನ್ನು ಅರ್ಪಿಸಿ ತೀರ್ಥ ಸ್ನಾನ ಮಾಡುವ ಮೂಲಕ ವಿಭೂತಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಬಾರಿಯ ಗುಂಪೆ ವಿಭೂತಿ ಸಂಗ್ರಹಕ್ಕೆ ನೂರರಷ್ಟು ಭಕ್ತರು ಆಗಮಿಸಿದ್ದರು. ಕಾಟುಕುಕ್ಕೆ ಆಗಲ್ಪಾಡಿಯಿಂದ ಬಂದ ಆಸ್ತಿಕರು ಗುಹಾ ಪ್ರವೇಶ ಮಾಡಿದರು. ಭಕ್ತರು ಗುಂಪೆಯ ನೆಲ್ಲಿತೀರ್ಥದಲ್ಲಿ ಮಿಂದು ಶುಚಿಭ್ಸೂತರಾಗಿ ಗೋವಿಂದನ ಸ್ಮರಣೆಯೊಂದಿಗೆ ಕಣಿವೆ ಮಾರ್ಗವಾಗಿ ಸಂಚರಿಸಿ ಸುಮಾರು 200 ಮೀ. ದೂರದ ವಿಭೂತಿ ಗುಹೆ ಪ್ರವೇಶಿಸಿದರು. ತೀರ ಬೆಳಕಿನ ಅಭಾವವಿರುವ ಕತ್ತಲ ಗುಹೆಗೆ ದೀಪ ನಿಷಿದ್ಧವಾದ ಕಾರಣ ಒಬ್ಬರ ಹಿಂದೆ ಒಬ್ಬರಂತೆ ಕೈ ಹಿಡಿದು ಗುಹಾ ಸುರಂಗ ಸಂಚರಿಸಿ ವಿಭೂತಿ ಸಂಗ್ರಹಿಸುವ ಮೂಲಕ ಪುನೀತರಾದರು.
ಮನುಷ್ಯನ ಪ್ರಕೃತಿ ಸಾಮೀಪ್ಯವನ್ನು ಸೂಚಿಸುವ ತೀರ್ಥ ಅಮಾವಾಸ್ಯೆ ಆಚರಣೆಯು ಮಳೆಗಾಲದ ಅನಂತರ ಸ್ವಾಭಾವಿಕವಾಗಿ ಪುಟಿದೇಳುವ ನೈಸರ್ಗಿಕ ಜಲ ಮೂಲಕ್ಕೆ ನಮಿಸಿ ಗೌರವ ಸಲ್ಲಿಸುವುದು ಇಲ್ಲಿನ ಪ್ರಧಾನ ಅಂಶವಾಗಿದೆ. ಪೆÇಸಡಿ ಗುಂಪೆ ಗುಹಾಲಯ ಪ್ರವೇಶಿಸಿ ವಿಭೂತಿ ಶೇಖರಿಸುವ ಕಾರ್ಯ ಪ್ರಕೃತಿಯೊಂದಿಗೆ ಸಂಸ್ಕøತಿಯನ್ನು ಬೆಸೆಯುವ ಕಾರ್ಯವಾಗಿದ್ದು, ಹೆಚ್ಚಿನ ಪ್ರಧಾನ್ಯವನ್ನು ಪಡೆದಿದೆ. ಪ್ರತೀ ವರ್ಷ ತೀರ್ಥ ಅಮಾವಾಸ್ಯೆ ದಿನದ ಬೆಳಗಿನ ಜಾವ ಗಾಢಾಂಧಕಾರದ ಗುಹೆಯನ್ನು ಪ್ರವೇಶಿಸಿ ಪವಿತ್ರ ವಿಭೂತಿ ಸಂಗ್ರಹಿಸುವುದು ಇಲ್ಲಿನ ವಾಡಿಕೆಯಾಗಿದೆ. ಶೈವ, ನಾಥ, ಶಾಕ್ತ ಪಂಥದ ಅನುಯಾಯಿಗಳು ಪೆÇಸಡಿಗುಂಪೆಗೆ ಸಮೀಪಿಸಿ ತೀರ್ಥ ಗುಂಪೆಯಲ್ಲಿ ಮಿಂದು ಶುಚಿರ್ಭೂತರಾಗಿ, ಸುಮಾರು 70 ಮೀ. ಉದ್ದದ ಇಳಿಜಾರು ಕಣಿವೆಯ ಮೂಲಕ ಸಾಗಿ, ಗುಂಪೆ ಗುಹಾ ಪ್ರವೇಶ ಮಾಡುವುದು ಶತಮಾನಗಳಿಂದ ರೂಢಿಯಲ್ಲಿದೆ. ಪೆÇಸಡಿ ಗುಂಪೆ ತೀರ್ಥ ಮತ್ತು ವಿಭೂತಿ ಸಂಗ್ರಹಕ್ಕೆ ಹಲವು ಐತಿಹ್ಯಗಳೊಂದಿಗೆ ಪೌರಾಣಿಕ ಕಥೆಗಳು ಇವೆ. ಪಾಂಡವರು 12 ವರ್ಷಗಳ ಕಾಲ ವನವಾಸದ ಸಂದರ್ಭ ಈ ಪ್ರದೇಶಕ್ಕೆ ಆಗಮಿಸಿ ಮಹಾಯಾಗವನ್ನು ಕೈಗೊಂಡಿದ್ದರು ಮತ್ತು ಯಾಗದಿಂದ ಸಂಗ್ರಹಗೊಂಡ ಬೂದಿಯನ್ನು ಇಲ್ಲಿನ ಗುಹೆಯೊಂದರಲ್ಲಿ ಶೇಖರಿಸಿಟ್ಟರು ಎಂಬ ನಂಬಿಕೆಯಿದೆ. ಬೆಟ್ಟ ಪ್ರದೇಶದಲ್ಲಿ ಹಲವು ಗುಹೆಗಳನ್ನು ಕಾಣಬಹುದಾಗಿದ್ದು ದೂರದ ಕಣ್ಹೇರಿ, ಅಜಂತಾ ಗುಹೆಗಳನ್ನು ನೆನಪಿಸುತ್ತವೆ. ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಸಂಶೋಧನ ಸಂಪುಟದಲ್ಲಿ ಪೆÇಸಡಿ ಗುಂಪೆ ಗುಡ್ಡದ ಬಗೆಗಿನ ನಿದರ್ಶನವನ್ನು ನೀಡಲಾಗಿದ್ದು ನಾಥ ಪಂಥದ ಆಗಮನದ ಬಗ್ಗೆ ಉಲ್ಲೇಖೀಸಲಾಗಿದೆ. ಕ್ರಿ.ಶ. 9ನೇ ಶತಮಾನದಲ್ಲಿ ನಾಥ ಪಂಥವು ದಕ್ಷಿಣ ಕರಾವಳಿಯಲ್ಲಿ ಬೇರೂರಿತ್ತು. ಕದಿರೆ, ವಿಟ್ಲದಲ್ಲೂ ನಾಥಪಂಥದ ಜೋಗಿ ಮಠವಿದೆ.
ಕಾಸರಗೋಡು ತಾಲೂಕಿನ ಮಂಗಲ್ಪಾಡಿಯಿಂದ ಸುಮಾರು 8-9 ಮೈಲು ಮೂಡಲಾಗಿ ಪೆÇಸಡಿಗುಂಪೆ ಎಂಬ ಗುಡ್ಡವಿದೆ. ಅಲ್ಲಿಯ ಗುಹೆಗಳಲ್ಲಿ ನಾಥ ಪಂಥದವರ ವಾಸ್ತವ್ಯವಿತ್ತು. ಅಲ್ಲಿ ವಿಭೂತಿ ದೊರೆಯುತ್ತದೆ. ಜೋಗಿಗಳು ಅಲ್ಲಿ ಇದ್ದಿರಬೇಕೆಂಬುದಕ್ಕೆ ಇದು ಚಿಕ್ಕ ನಿದರ್ಶನ ಎಂಬುದಾಗಿ ಉಲ್ಲೇಖೀಸಲಾಗಿದೆ. ಹೀಗೆ ಐತಿಹಾಸಿಕವಾಗಿ ಪೌರಾಣಿಕವಾಗಿ ಮಹತ್ವ ಪಡೆದಿರುವ ಪೆÇಸಡಿಗುಂಪೆ ಪ್ರದೇಶದಲ್ಲಿ ಬಾಂಜಾರ ಗುಹೆಗಳು ಎಂದು ಕರೆಯಲ್ಪಡುವ ಕೆಲ ಬೃಹತ್ ಗುಹೆಗಳಿವೆ. ಕೆಲ ಗುಹೆಗಳ ಒಳಾಂಗಣ ಹೆಚ್ಚು ವಿಸ್ತಾರವಾಗಿದ್ದು, ಸುಮಾರು ಐವತ್ತು ಮಂದಿ ನಿಲ್ಲಬಹುದಾಗಿದೆ. ಉಳಿದಂತೆ ಹಲವು ದ್ವಿಮುಖ ಬಾವಿಗಳು, ಸುರಂಗಮಾರ್ಗಗಳು ಪೆÇಸಡಿಗುಂಪೆಯ ಮುಡಿಯಲ್ಲಿವೆ. ಗುಂಪಾ ಎಂದರೆ ಮಣ್ಣಿನ ದಿಬ್ಬ ಅಥವಾ ದೂರದಲ್ಲಿರುವ ಎತ್ತರದ ಪ್ರದೇಶ ಎಂದರ್ಥ.
ಪೆÇಸಡಿ ಎಂಬುದು ಕನ್ನಡ ಭಾಷೆಯ ತದ್ಭವವಾಗಿದ್ದು ಹೊಸದು ಎಂಬುದನ್ನು ಸೂಚಿಸುತ್ತದೆ. ಹೊಸ ಬೆಟ್ಟ ಎಂಬಂತಿರುವ ಶಬ್ದಾರ್ಥವು ಹಳೆ ಆಚರಣೆಯೊಂದಿಗೆ, ಆಧುನಿಕ ಕಾಲಘಟ್ಟದಲ್ಲೂ ಪ್ರಕೃತಿ ಸಾಮೀಪ್ಯದ ನವಚೈತನ್ಯ ಶಕ್ತಿಯ ದ್ಯೋತಕವೆಂಬಂತೆ ಭಾಸವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪೆÇಸಡಿ ಗುಂಪೆ ಬೆಟ್ಟ ಪ್ರದೇಶ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ವಾರಾಂತ್ಯದ ಚಾರಣಧಾಮವಾಗಿ ಹೆಸರುವಾಸಿಯಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ.
ವಿಭೂತಿ ಸಂಗ್ರಹದ ಮಹತ್ವ:
ಪುರಾತನ ಕಾಲದಿಂದ ನಡೆದು ಬರುತ್ತಿರುವ ಪರಂಪರೆಯಂತೆ ಶ್ರಾವಣ ಮಾಸದ ತೀರ್ಥ ಅಮಾವಾಸ್ಯೆಯಂದು ಪೆÇಸಡಿಗುಂಪೆಯ ಗುಹೆ ಪ್ರವೇಶಿಸಿ ವಿಭೂತಿ ಸಂಗ್ರಹಿಸುವುದು ವಾಡಿಕೆಯಾಗಿದೆ. ಶಾಕ್ತ ಮತ್ತು ಶೈವ ಸಂಪ್ರದಾಯದಂತೆ ವಿಭೂತಿ ಧಾರಣೆ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಪೆÇಸಡಿಗುಂಪೆ ಗುಹಾ ಪ್ರವೇಶ ವಿಶೇಷವಾಗಿದೆ.
ಚಾರಣಧಾಮ:
ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕಿನ ಬಾಯಾರು ಸಮೀಪದ ಪೆÇಸಡಿಗುಂಪೆ ಪ್ರಕೃತಿ ಮನೋಹರವಾದ ಚಾರಣಧಾಮ. ಐತಿಹಾಸಿಕವಾಗಿಯೂ ಪ್ರಸಿದ್ಧಿ ಪಡೆದಿರುವ ಈ ಸ್ಥಳ ಪೌರಾಣಿಕವಾಗಿಯೂ ಜನಸಾಮಾನ್ಯರ ಮನಸ್ಸಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ತೀರ್ಥ ಅಮಾವಾಸ್ಯೆಯ ಪುಣ್ಯ ದಿನದಂದು ಇಲ್ಲಿನ ಗುಹೆಯೊಂದರಲ್ಲಿ ಸಂಚರಿಸಿ ವಿಭೂತಿ ಶೇಖರಿಸಿ, ಭಕ್ತಿ ಶ್ರದ್ಧೆಯೊಂದಿಗೆ ಪುನೀತಭಾವ ಪಡೆಯುವುದು ಇಲ್ಲಿನ ಸ್ಥಳೀಯರ ವಾಡಿಕೆಯಾಗಿದೆ. ತನ್ನೊಳಗೆ ಹಲವು ಐತಿಹ್ಯಗಳನ್ನು ಒಳಗೊಂಡಿರುವ ಪೆÇಸಡಿಗುಂಪೆ ತೀರ್ಥ ಕೋಡಿಪ್ಪಾಡಿ ತೀರ್ಥ, ನರಹರಿಪರ್ವತ ತೀರ್ಥ ಸಹಿತ ಬೆಂದ್ರ್ ತೀರ್ಥದಷ್ಟೇ ವಿಶೇಷವಾದುದಾಗಿದೆ.






