ಕಾಸರಗೋಡು: ಕೋವಿಡ್ ಸಂದಿಗ್ಧತೆ ಹಿನ್ನೆಲೆಯಲ್ಲಿ ಒಂದುವರೆ ವರ್ಷ ಕಾಲ ಮುಚ್ಚುಗಡೆಗೊಂಡಿದ್ದ ಶಿಕ್ಷಣ ಸಂಸ್ಥೆಗಳು ನ. 1ರಂದು ಪುನರಾರಂಭಗೊಳ್ಳಲಿದ್ದು, ಶಾಲಾ ತರಗತಿ ಹಾಗೂ ವಠಾರವನ್ನು ಶುಚೀಕರಿಸಿ ಮಕ್ಕಳಿಗಾಗಿ ಸಜ್ಜುಗೊಳಿಸಲಾಗುತ್ತಿದೆ.
ಶಾಲೆಗಳ ಶುಚೀಕರಣ ಕಾರ್ಯಗಳಲ್ಲಿ ನಾಡಿನ ವಿವಿಧ ಸಂಘಟನೆಗಳು, ಹೆತ್ತವರು, ಶಿಕ್ಷಕರು, ಪೂರ್ವವಿದ್ಯಾರ್ಥಿಗಳೂ ಕೈಜೋಡಿಸುತ್ತಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆ ಪ್ರತಿನಿಧಿಗಳು ಹಾಗೂ ಅಧ್ಯಾಪಕರು ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲು ಎಲ್ಲ ವ್ಯವಸ್ಥೆ ಸಜ್ಜುಗೊಳಿಸಿದ್ದು, ಶಾಲೆ ತೆರೆದು ಕಾರ್ಯಾಚರಿಸುವ ಮಾರ್ಗಸೂಚಿಯನ್ನು ಈಗಾಗಲೇ ಪೂರ್ತಿಗೊಳಿಸಲಾಗಿದೆ. ಮಧ್ಯಾಹ್ನದ ಊಟಕ್ಕಿರುವ ವ್ಯವಸ್ಥೆ, ಮಕ್ಕಳಿಗೆ ಹೋಮಿಯೋ ರೋಗಪ್ರತಿರೋಧ ಔಷಧ ವಿತರಣೆ, ಒಂದು ಶಾಲೆಗೆ ಒಬ್ಬ ವೈದ್ಯನ ರೀತಿಯಲ್ಲಿ ಕಾರ್ಯಸೂಚಿ ಖಚಿತಪಡಿಸಿಕೊಂಡು ಈಗಾಗಲೇ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ.
ಎಲ್ಲ ಶಾಲೆಗಳಿಗೂ ಫಿಟ್‍ನೆಸ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲಾಗಿದ್ದು, ಇದಕ್ಕೆ ಅರ್ಹವಲ್ಲದ ಶಾಲೆಗಳಿದ್ದಲ್ಲಿ, ಇಲ್ಲಿನ ಮಕ್ಕಳನ್ನು ಸನಿಹದ ಶಾಲೆಗೆ ದಾಖಲಿಸುವ ಬಗ್ಗೆಯೂ ಪರಿಶೀಲಿಸುವಂತೆ ಸೂಚಿಸಲಾಗಿದೆ. , 10ರಿಂದ 12ನೇ ತರಗತಿಗಳು ನ. 1ರಂದು ಹಾಗೂ ಉಳಿದ ತರಗತಿಗಳು ನ. 15ರಂದು ಆರಂಭಗೊಳ್ಳಲಿದೆ. ಕೋವಿಡ್ ಮಾನದಂಡದನ್ವಯ ಮಕ್ಕಳನ್ನು ತರಗತಿಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.




