HEALTH TIPS

'ಅಫ್ಘಾನ್‌ ಭಯೋತ್ಪಾದನಾ ಕೇಂದ್ರವಾಗದಂತೆ ತಡೆಯಬೇಕು': ಜಿ20 ಶೃಂಗಸಭೆಯಲ್ಲಿ ಮೋದಿ

              ನವದೆಹಲಿ: ಅಫ್ಘಾನಿಸ್ತಾನವು ಭಯೋತ್ಪಾದನೆಯ ಮೂಲವಾಗದಂತೆ ತಡೆಯಬೇಕಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಗಳವಾರ ಜಿ20 ಶೃಂಗಸಭೆಯಲ್ಲಿ ಕರೆ ನೀಡಿದರು. ಹಾಗೆಯೇ ಈ ಸಂದರ್ಭದಲ್ಲಿ ಅಫ್ಘಾನಿಸ್ತಾನದಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆಯೂ ಮಾತನಾಡಿದರು.

           ಅಫ್ಘಾನಿಸ್ತಾನದ ವಿಚಾರದಲ್ಲಿ ವರ್ಚುವಲ್‌ ಆಗಿ ನಡೆದ ಜಿ 20 ಅಸಾಧಾರಣ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಫ್ಘಾನಿಸ್ತಾನಕ್ಕೆ ತುರ್ತು ಮತ್ತು ತಡೆರಹಿತ ಮಾನವೀಯ ನೆರವು ನೀಡುವಂತೆ ಒತ್ತಾಯ ಮಾಡಿದರು. ಹಾಗೆಯೇ ಈ ಸಂದರ್ಭದಲ್ಲಿ ದೇಶದಲ್ಲಿ ಅಂತಗರ್ತ ಆಡಳಿತದ ಅಗತ್ಯವನ್ನು ಒತ್ತಿ ಹೇಳಿದರು.

          "ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿಯನ್ನು ಸುಧಾರಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 2593 ಆಧಾರಿತ ಏಕೀಕೃತ ಅಂತಾರಾಷ್ಟ್ರೀಯ ಪ್ರತಿಕ್ರಿಯೆ ಅಗತ್ಯ," ಎಂದು ಕೂಡಾ ಈ ಸಂದರ್ಭದಲ್ಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

           "ಅಫ್ಘಾನಿಸ್ತಾನದ ಜಿ 20 ಸಭೆಯಲ್ಲಿ ಭಾಗಿಯಾದೆ. ಅಫ್ಘಾನಿಸ್ತಾನವನ್ನು ಭಯೋತ್ಪಾದನೆಯ ಮೂಲವನ್ನಾಗಿ ಪರಿವರ್ತನೆ ಆಗುವುದನ್ನು ತಡೆಯಬೇಕಾಗಿದೆ ಎಂದು ನಾನು ಈ ಸಂದರ್ಭದಲ್ಲಿ ಒತ್ತಿ ಹೇಳಿದ್ದೇನೆ," ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ. "ಇನ್ನು ಈ ಸಂದರ್ಭದಲ್ಲೇ ಅಫ್ಘಾನಿಸ್ತಾನದ ಜನರಿಗೆ ಅಗತ್ಯವಿರುವ ಮಾನವೀಯ ನೆರವು ನೀಡಲು ಕೂಡಾ ಕರೆ ನೀಡಲಾಗಿದೆ," ಎಂದು ಪ್ರಧಾನ ಮಂತ್ರಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

            ಯುಎಸ್‌ ತನ್ನ ಸೇನೆಯನ್ನು 20 ವರ್ಷಗಳ ಬಳಿಕ ಹಿಂದಕ್ಕೆ ಪಡೆದಿದೆ. ಈ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ತಾಲಿಬಾನ್‌ ಅಫ್ಘಾನಿಸ್ತಾನದ ಮೇಲೆ ದಾಳಿಯನ್ನು ನಡೆಸಿದೆ. ಆಗಸ್ಟ್‌ 15 ರಂದು ತಾಲಿಬಾನ್‌ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ಪಡೆದುಕೊಂಡಿದೆ. ಆ ಬಳಿಕ ತಾಲಿಬಾನ್‌ ಅಫ್ಘಾನಿಸ್ತಾನದಲ್ಲಿ ತನ್ನ ಸರ್ಕಾರವನ್ನು ಕೂಡಾ ರಚನೆ ಮಾಡಿದೆ. ಆದರೆ ಈವರೆಗೂ ತಾಲಿಬಾನ್‌ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿಲ್ಲ.

            ಈ ನಡುವೆ ಅಫ್ಘಾನಿಸ್ತಾನದಲ್ಲಿ ಹಲವಾರು ಬಾಂಬ್‌ ದಾಳಿ, ಭಯೋತ್ಪಾದನಾ ದಾಳಿಗಳು ನಡೆಯುತ್ತಿದೆ. ಉತ್ತರ ಅಫ್ಘಾನಿಸ್ತಾನದ ಮಸೀದಿಯೊಂದರಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ದೋಸ್ತ್ ಮೊಹಮ್ಮದ್ ಅವರು ಹೇಳಿರುವ ಪ್ರಕಾರ ಶಿಯಾ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದ್ದು, ದಾಳಿಯಲ್ಲಿ ಬಹುತೇಕರು ಮೃತಪಟ್ಟಿದ್ದಾರೆ. ಸ್ಫೋಟದಲ್ಲಿ ಅಲ್ಪಸಂಖ್ಯಾತ ಸಮುದಾಯದ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

            ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ತನ್ನ ಸರ್ಕಾರವನ್ನು ರಚನೆ ಮಾಡುತ್ತಿದ್ದಂತೆ ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಉಗ್ರರ ಸಂಖ್ಯೆ ಅಧಿಕವಾಗಿದೆ. ಕಳೆದ ಹಲವಾರು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾವುಗಳು ಸಂಭವಿಸುತ್ತಿದೆ.

            ಅಫ್ಘಾನಿಸ್ತಾನದಲ್ಲಿ ಬಾಂಬ್‌ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಕಾಬೂಲ್‌ನ ಹೊಟೇಲ್‌ನಿಂದ ತಕ್ಷಣ ಹೊರಡುವಂತೆ ಸೋಮವಾರ ಯುನೈಟೆಡ್‌ ಸ್ಟೇಟ್ಸ್‌ ಹಾಗೂ ಬ್ರಿಟನ್‌ ತನ್ನ ನಾಗರಿಕರಿಗೆ ಸೂಚನೆ ನೀಡಿದೆ. ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಮಸೀದಿಯೊಂದರ ಮೇಲೆ ಬಾಂಬ್‌ ದಾಳಿ ನಡೆದು ಈ ದಾಳಿಯ ಹೊಣೆಯನ್ನು ಐಎಸ್‌ಐಎಸ್‌ ಗುಂಪು ಹೊತ್ತ ಬಳಿಕ ಈ ಎಚ್ಚರಿಕೆಯನ್ನು ಯುಎಸ್‌ ಹಾಗೂ ಬ್ರಿಟನ್‌ ಕಾಬೂಲ್‌ನಲ್ಲಿ ಇರುವ ತನ್ನ ನಾಗರಿಕರಿಗೆ ನೀಡಿದೆ.

ಇನ್ನು ಮೂರು ವಾರಗಳ ಹಿಂದೆ ಅಫ್ಘಾನಿಸ್ತಾನದ ಬಗ್ಗೆ ಮಾತನಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಅಫ್ಘಾನಿಸ್ತಾನದಲ್ಲಿ ರಾಜಕೀಯ ಬದಲಾವಣೆ ಅಂತರ್ಗತವಲ್ಲ" ಎಂದು ಹೇಳಿದ್ದರು. "ಮೊದಲ ವಿಷಯವೇನೆಂದರೆ ಅಫ್ಘಾನಿಸ್ತಾನದಲ್ಲಿ ಅಧಿಕಾರ ಬದಲಾವಣೆಯು ಅಂತಗರ್ತವಲ್ಲ, ಇದು ಮಾತುಕತೆ ಇಲ್ಲದೆ ಸಂಭವಿಸಿದೆ. ಅಫ್ಘಾನ್‌ನಲ್ಲಿ ಮಹಿಳೆಯರು ಮತ್ತು ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವಿಭಾಗಗಳ ಪ್ರಾತಿನಿಧ್ಯವು ಮುಖ್ಯವಾಗಿದೆ. ಅದಕ್ಕಾಗಿಯೇ ಜಾಗತಿಕ ಸಮುದಾಯವು ಅಫ್ಘಾನಿಸ್ತಾನದ ಹೊಸ ರಾಜಕೀಯ ವ್ಯವಸ್ಥೆಯ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಬಹಳ ಎಚ್ಚರವಾಗಿದೆ," ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries