HEALTH TIPS

ಕೈ ನಾಯಕರದ್ದು ಒಂದೇ ಕೂಗು: ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ 2ನೇ ಬಾರಿ ರಾಹುಲ್ ಗಾಂಧಿ!?

                ನವದೆಹಲಿ: ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ) ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸಂಸದ ರಾಹುಲ್ ಗಾಂಧಿ ಹೆಸರನ್ನೇ ಪರಿಗಣಿಸುವಂತೆ ಪಕ್ಷದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.


             ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆಸಲಾಯಿತು. ಈ ವೇಳೆ ಕೇಂದ್ರದ ಮಾಜಿ ರಕ್ಷಣಾ ಸಚಿವ ಎ ಕೆ ಆಂಟೋನಿ, ಪಂಜಾಬ್ ಮುಖ್ಯಮಂತ್ರಿ, ರಾಜಸ್ಥಾನ ಮುಖ್ಯಮಂತ್ರಿ ಹಾಗೂ ಛತ್ತೀಸ್ ಗಢ ಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸ್ ಹಿರಿಯ ನಾಯಕರು ರಾಹುಲ್ ಗಾಂಧಿ ಆಯ್ಕೆಗೆ ಸಮ್ಮತಿ ಸೂಚಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

               ಕಾಂಗ್ರೆಸ್ ಪಕ್ಷದ ಅಗ್ರಮಾನ್ಯ ಸ್ಥಾನದ ಆಯ್ಕೆಗಾಗಿ 2022ರ ಆಗಸ್ಟ್ 21ರಿಂದ ಸೆಪ್ಟೆಂಬರ್ 20ರೊಳಗೆ ಚುನಾವಣೆ ನಡೆಸುವ ಬಗ್ಗೆ ಕಾರ್ಯಕಾರಣಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕ ಕೆ ಸಿ ವೇಣುಗೋಪಾಲ್, "ಇಡೀ ಕಾಂಗ್ರೆಸ್ ಪಕ್ಷ ಮತ್ತು ಕಾರ್ಯಕರ್ತರು ಒಮ್ಮತದಿಂದ ರಾಹುಲ್ ಗಾಂಧಿಯವರನ್ನು ನಾಯಕನನ್ನಾಗಿ ಬಯಸುತ್ತಾರೆ" ಎಂದು ಹೇಳಿದ್ದಾರೆ.


                  ರಾಹುಲ್ ಗಾಂಧಿಗೆ ಪಟ್ಟ ಕಟ್ಟಲು ಸಮ್ಮತಿ

     * "ಎಲ್ಲರೂ ಒಮ್ಮತದಿಂದ ಒಪ್ಪಿಕೊಂಡಿದ್ದಾರೆ... ರಾಹುಲ್ ಗಾಂಧಿ ಆಗುತ್ತಾರೋ ಇಲ್ಲವೋ ಎಂಬುದು ಅವರಿಗೆ ಬಿಟ್ಟದ್ದು. ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಬೇಕು ಎಂಬುದು ಎಲ್ಲರ ಅಭಿಪ್ರಾಯ" ಎಂದು ಹಿರಿಯ ನಾಯಕಿ ಅಂಬಿಕಾ ಸೋನಿ ಹೇಳಿರುವ ಬಗ್ಗೆ ಎಎನ್‌ಐ ವರದಿಯಲ್ಲಿ ಉಲ್ಲೇಖಿಸಲಾಗಿದೆ.

            * "ಕಾಂಗ್ರೆಸ್ ಪಕ್ಷದ ಮುಖ್ಯಸ್ಥರ ಸ್ಥಾನದ ಬಗ್ಗೆ ಮಾತುಕತೆಗಳು ನಡೆದವು ಮತ್ತು ಎಲ್ಲರೂ ಒಮ್ಮತದಿಂದ ರಾಹುಲ್ ಗಾಂಧಿಯವರ ಹೆಸರನ್ನು ಹೇಳಿದ್ದಾರೆ," ಎಂದು ಮಾಜಿ ಕೇಂದ್ರ ಸಚಿವೆ ಮತ್ತು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಹೇಳಿದ್ದಾರೆ.

                          ರಾಷ್ಟ್ರೀಯ ನಾಯಕತ್ವದ ಬಿಕ್ಕಟ್ಟು ಸೃಷ್ಟಿಸಿದ ರಾಹುಲ್ ರಾಜೀನಾಮೆ

        ಕಳೆದ 2019ರ ಲೋಕಸಭಾ ಚುನಾವಣೆ ಸೋಲಿನ ಹೊಣೆಹೊತ್ತು ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅವರ ರಾಜೀನಾಮೆಯಿಂದ ಪಕ್ಷದಲ್ಲಿ ನಾಯಕತ್ವದ ಬಿಕ್ಕಟ್ಟು ಸೃಷ್ಟಿಯಾಯಿತು. ಪಕ್ಷದ ಆಂತರಿಕ ಸ್ಥಿತಿ ಸುಧಾರಿಸಿಕೊಳ್ಳದ ಹಿನ್ನೆಲೆ ಸೋನಿಯಾ ಗಾಂಧಿಯವರೇ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಅನಂತರದ ಬೆಳವಣಿಗೆಗಳಲ್ಲಿ ಇದೇ ಮೊದಲ ಬಾರಿಗೆ ರಾಹುಲ್ ಗಾಂಧಿಯವರನ್ನೇ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. ಇದರ ಹೊರತಾಗಿ ಕಳೆದ 2020ರ ಡಿಸೆಂಬರ್ ತಿಂಗಳಿನಲ್ಲೇ ಕಾಂಗ್ರೆಸ್ ಹಿರಿಯ ಮುಖಂಡ ರಂದೀಪ್ ಸರ್ಜೇವಾಲಾ ಅವರು, ರಾಹುಲ್ ಗಾಂಧಿ ಪಕ್ಷದ ರಾಷ್ಟ್ರಾಧ್ಯಕ್ಷರಾಗುವುದು ಶೇ.99.9ರಷ್ಟು ನಿಶ್ಚಿತ ಎಂದು ಹೇಳಿದ್ದರು.

                    ಜಿ-23 ನಾಯಕರಿಗೆ ಸೋನಿಯಾ ಗಾಂಧಿ ಸ್ಪಷ್ಟ ಸಂದೇಶ

          "ನೀವು ಬಯಸುವುದಾದರೆ, ಅನುಮತಿ ನೀಡುವುದೇ ಆದರೆ ನಾನು ಪೂರ್ಣಾವಧಿವರೆಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಯುತ್ತೇನೆ ಹಾಗೂ ಅಧ್ಯಕ್ಷ ಸ್ಥಾನದ ಮೇಲೆ ಹಿಡಿತವನ್ನು ಕಾಯ್ದುಕೊಳ್ಳುತ್ತೇನೆ," ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. "ನಿಮಗೆ ತಿಳಿದಿರಲಿ, ನಾನು ಡಾ. ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿಯವರಂತೆ ನಾನು ಅವರನ್ನು ಪ್ರಧಾನ ಮಂತ್ರಿಯೊಂದಿಗೆ ಕರೆದುಕೊಂಡು ಹೋಗುತ್ತಿದ್ದೇನೆ. ನಾನು ಸಮಾನ ಮನಸ್ಕ ರಾಜಕೀಯ ಪಕ್ಷಗಳೊಂದಿಗೆ ನಿಯಮಿತವಾಗಿ ಸಂವಹನ ನಡೆಸುತ್ತಿದ್ದೇನೆ. ನಾವು ರಾಷ್ಟ್ರೀಯ ಸಮಸ್ಯೆಗಳ ಕುರಿತು ಜಂಟಿ ಹೇಳಿಕೆಗಳನ್ನು ನೀಡಿದ್ದೇವೆ ಹಾಗೂ ಸಂಸತ್ತಿನಲ್ಲಿ ನಮ್ಮ ಕಾರ್ಯತಂತ್ರ ಹೇಗಿರಬೇಕು ಎಂಬುದನ್ನು ಸಂಯೋಜಿಸಿದ್ದೇವೆ," ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

             "ನಾನು ಯಾವಾಗಲೂ ನೇರ ಮತ್ತು ಪ್ರಾಮಾಣಿಕರೆಯನ್ನು ಮೆಚ್ಚಿಕೊಳ್ಳುತ್ತೇನೆ. ಮಾಧ್ಯಮಗಳ ಮೂಲಕ ನನ್ನೊಂದಿಗೆ ಮಾತನಾಡುವ ಯಾವುದೇ ಅಗತ್ಯಗಳೂ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಏನೇ ಸಮಸ್ಯೆಗಳಿದ್ದರೂ ಯಾವುದೇ ರೀತಿ ಗೊಂದಲಗಳಿದ್ದರೂ ನೇರವಾಗಿ ಬಂದು ಚರ್ಚೆ ನಡೆಸಿ. ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ನಡೆಸಿದ ಚರ್ಚೆಗಳು ಈ ನಾಲ್ಕುಗೋಡೆಗಳಿಂದ ಹೊರಗೆ ಹೋಗಬಾರದು. ಪಕ್ಷದ ಆಂತರಿಕ ವಿಚಾರಗಳನ್ನು ಬಾಹ್ಯವಾಗಿ ಚರ್ಚಿಸಬಾರದು," ಎನ್ನುವ ಮೂಲಕ ಜಿ-23 ನಾಯಕರಿಗೆ ಸೋನಿಯಾ ಗಾಂಧಿ ಎಚ್ಚರಿಕೆ ನೀಡಿದ್ದಾರೆ.

                           ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಸೆಪ್ಟೆಂಬರ್-2022ರಲ್ಲಿ ಚುನಾವಣೆ

              ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ಹಾಗೂ ಪರಿಣಾಮಕಾರಿ ನಾಯಕತ್ವದ ಕೊರತೆ ಬಗ್ಗೆ ಜಿ-23 ನಾಯಕರು ಮೊದಲಿನಿಂದಲೂ ಆರೋಪಿಸುತ್ತಾ ಬಂದಿದ್ದಾರೆ. ಶನಿವಾರದ ಸಭೆಯಲ್ಲಿ ಈ ಬಗ್ಗೆ ಹೆಚ್ಚು ಚರ್ಚೆಯಾಗಿದೆ. 2022ರಲ್ಲಿ ಉತ್ತರ ಪ್ರದೇಶ, ಪಂಜಾಬ್, ಗುಜರಾತ್ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಶುರುವಾಗಲಿದೆ. 2022ರ ಸೆಪ್ಟೆಂಬರ್ ಹೊತ್ತಿಗೆ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿರುವ ಸೋನಿಯಾ ಗಾಂಧಿಯವರನ್ನು ಬದಲಿಸುವ ಹಾಗೂ ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುವ ಬಗ್ಗೆ ಬೇಡಿಕೆ ಸಲ್ಲಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಸೆಪ್ಟೆಂಬರ್ ತಿಂಗಳಿನಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗುವುದು ಎಂದು ತಿಳಿದು ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries