ನವದೆಹಲಿ : ಅದಾನಿ ಎಂಟರ್‍ಪ್ರೈಸಸ್ ಲಿಮಿಟೆಡ್ ಸಂಸ್ಥೆಗೆ ಮಂಗಳೂರು, ಲಕ್ನೋ ಮತ್ತು ಅಹ್ಮದಾಬಾದ್ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಕಳೆದ ವರ್ಷ ಕೇವಲ ರೂ 500 ಕೋಟಿಗೆ ಹಸ್ತಾಂತರಿಸಲಾಗಿತ್ತು, ಆದರೆ ಕೇಂದ್ರ ವಿಮಾನಯಾನ ನಿರ್ದೇಶನಾಲಯವು ಪಿಪಿಎಸಿ ಮುಂದೆ ಅನುಮೋದನೆಗೆ ಬೇಡಿಕೆ ಸಲ್ಲಿಸುವಾಗ ಇದೇ ಸೊತ್ತಿನ ಮೌಲ್ಯ ರೂ 1,300 ಕೋಟಿ ಎಂದು ನಿಗದಿಪಡಿಸಲಾಗಿತ್ತು ಎಂದು ವಿಮಾನ ನಿಲ್ದಾಣಗಳ ಪ್ರಾಧಿಕಾರ ಉದ್ಯೋಗಿಗಳ ಯೂನಿಯನ್ ಅಕ್ಟೋಬರ್ 2ರಂದು ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಬಹಿರಂಗ ಪತ್ರದಲ್ಲಿ ಆರೋಪಿಸಲಾಗಿದೆ.
ಒಟ್ಟು ಆರು ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಪ್ರಾಧಿಕಾರ ಡಿಸೆಂಬರ್ 2018ರಲ್ಲಿ ನಿರ್ಧರಿಸಿತ್ತು ಹಾಗೂ ಈ ಆರೂ ನಿಲ್ದಾಣಗಳಿಗೆ ಅತ್ಯಧಿಕ ಮೊತ್ತಕ್ಕೆ ಅದಾನಿ ಸಂಸ್ಥೆ ಬಿಡ್ ಮಾಡಿದೆ ಎಂದು ಫೆಬ್ರವರಿ 2019ರಲ್ಲಿ ಘೋಷಿಸಲಾಗಿತ್ತು. ಮೂರು ನಿಲ್ದಾಣಗಳನ್ನು ಈಗಾಗಲೇ ಹಸ್ತಾಂತರಿಸಲಾಗಿದ್ದರೆ ಉಳಿದ ಮೂರನ್ನು ಈ ತಿಂಗಳು ಹಸ್ತಾಂತರಿಸುವ ಸಾಧ್ಯತೆಯಿದೆ.
ಆರಂಭಗೊಂಡಂದಿನಿಂದ ಮೊದಲ ಬಾರಿಗೆ ವಿಮಾನ ನಿಲ್ದಾಣಗಳ ಪ್ರಾಧಿಕಾರ ರೂ 2,814 ಕೋಟಿ ನಷ್ಟವನ್ನು ಕಳೆದ ಆರ್ಥಿಕ ವರ್ಷದಲ್ಲಿ ಅನುಭವಿಸಿತ್ತು. 2020ರಲ್ಲಿ ಪ್ರಾಧಿಕಾರ ರೂ 1,985 ಕೋಟಿ ಆದಾಯ ಗಳಿಸಿತ್ತು. ಆದರೆ ನಷ್ಟದಿಂದಾಗಿ ಈ ವರ್ಷದ ಜುಲೈನಿಂದ ಉದ್ಯೋಗಿಗಳಿಗೆ ಆರು ತಿಂಗಳ ಕಾಲ ವೇತನ ಕಡಿತ ಮಾಡಲಾಗಿತ್ತು.
ಅದಾನಿ ಸಂಸ್ಥೆ ಹಾಗೂ ಮಂಗಳೂರು, ಲಕ್ನೋ ಮತ್ತು ಅಹ್ಮದಾಬಾದ್ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಜತೆಗಿನ ಒಪ್ಪಂದದಂತೆ ಅದಾನಿ ಸಂಸ್ಥೆಯು ತಲಾ ರೂ 74.5 ಕೋಟಿ, ರೂ 147 ಕೋಟಿ ಹಾಗೂ ರೂ 277 ಕೋಟಿ ಪಾವತಿಸಬೇಕಿತ್ತು.
ಆದರೆ ಪಿಪಿಎಸಿ ಮುಂದಿರಿಸಿದ ಪ್ರಸ್ತಾಪಿಸಲಾಗಿದ್ದ ಮೊತ್ತವನ್ನು ಪರಿಗಣಿಸಿದಾಗ ಅದಾನಿ ಸಂಸ್ಥೆ ನೀಡಿದ ಮೊತ್ತ ಕ್ರಮವಾಗಿ ಶೇ 80, ಶೇ 75 ಹಾಗೂ ಶೇ 28ರಷ್ಟು ಕಡಿಮೆಯಾಗಿತ್ತು.
ಉದ್ಯೋಗಿಗಳ ಯೂನಿಯನ್ ಈ ಅಂಶ ಸಹಿತ ಹಲವು ಅಂಶಗಳನ್ನು ತನ್ನ ಪತ್ರದಲ್ಲಿ ಉಲ್ಲೇಖಿಸಿದೆಯಲ್ಲದೆ ಉಳಿದ ಮೂರು ವಿಮಾನ ನಿಲ್ದಾಣಗಳ ಹಸ್ತಾಂತರಕ್ಕೆ ತಡೆ ಹೇರಬೇಕೆಂದು ಹಾಗೂ ಖಾಸಗೀಕರಣ ಪ್ರಕ್ರಿಯೆ ಕುರಿತಂತೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.




